ಪರಿಹಾರದ ವಿಚಾರದಲ್ಲಿ ತಾರತಮ್ಯ ಆರೋಪ: ಪ್ರಾಧಿಕಾರ ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು
ಬಾಗಲಕೋಟೆ,
ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಮುಳುಗಡೆ ಸಂತ್ರಸ್ತ ರೈತನೊಬ್ಬ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.
ಮುಳುಗಡೆ ಸಂತ್ರಸ್ತ ರೈತ ಬಸಪ್ಪ ಎಂಬಾತ, ತನ್ನ ಪರಿಹಾರದ ಕಡತವನ್ನು ಪದೇ ಪದೇ ವಿಳಂಬಗೊಳಿಸಿ ಕಚೇರಿಗೆ ಅಲೆದಾಡುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಕಚೇರಿಯ ಪ್ರಥಮ ದರ್ಜೆ ನೌಕರ ಅಂಕದ ಅವರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅದು ವಿಕೋಪಕ್ಕೆ ತಿರುಗಿದೆ.
ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡು ಪರಸ್ಪರ ಎದೆ ಮೇಲಿನ ಬಟ್ಟೆ ಹಿಡಿದು ಜಗಳ ನಡೆದಿದೆ. ಈ ವೇಳೆ ರೊಚ್ಚಿಗೆದ್ದ ರೈತ ಬಸಪ್ಪ, ನೌಕರನಿಗೆ ಚಪ್ಪಲಿಯಿಂದ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.ಘಟನೆ ನಡೆಯುತ್ತಿದ್ದ ವೇಳೆ ಕಚೇರಿಯಲ್ಲಿ ಇದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಕೂಗು ಹಾಕಿದರು. ಪರಿಹಾರ ವಿತರಣೆಯಲ್ಲಿ ಅನ್ಯಾಯ ಮತ್ತು ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಘಟನೆಯಿಂದ ಕೆಲಕಾಲ ಪ್ರಾಧಿಕಾರದ ಕಚೇರಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಮುಂದುವರಿಯಿತು. ಬಳಿಕ ಸ್ಥಳೀಯರು ಮತ್ತು ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಘಟನೆ ಕುರಿತು ಸಂಬಂಧಿತ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ದೂರು ದಾಖಲಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪರಿಹಾರದ ವಿಚಾರದಲ್ಲಿ ಉಂಟಾದ ಅಸಮಾಧಾನವೇ ಈ ಘಟನೆಗೆ ಕಾರಣವಾಗಿದ್ದು, ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸಂಘಟನೆಗಳು ಆಗ್ರಹಿಸಿವೆ.



