ಬಡ ಶಾಲಾ ಮಕ್ಕಳಿಗೆ 1000ಕ್ಕೂ ಅಧಿಕ ಉಚಿತ ಬ್ಯಾಗ್‌ಗಳ ವಿತರಣೆ : ಮಾದರಿಯಾಯ್ತು ಕವಿತಾ ಶ್ರೀನಾಥ್ ಸಮಾಜ ಸೇವೆ
ಇತರರಿಗೆ ಮಾದರಿಯಾಯ್ತು ನಿಜವಾದ ಸಮಾಜ ಸೇವಕಿಯ ಶಿಕ್ಷಣ ಪ್ರೇಮ..
ಶಿಕ್ಷಣದಿಂದ ಯಾರೊಬ್ಬರೂ ವಂಚಿತರಾಗಬಾರದೆಂದ ಕಾಂಗ್ರೆಸ್ ನಾಯಕಿ ಕವಿತಾ ಶ್ರೀನಾಥ್..
ಸದ್ದು ಗುಂಟೆ ಪಾಳ್ಯದಲ್ಲಿ ಸದ್ದಿಲ್ಲದೆ ನಿರಂತರ ಸಾಮಾಜಿಕ ಕಳಕಳಿ ಮೆರೆಯುವ ಅಪರೂಪದ ನಾಯಕಿ ಕವಿತಾ ಶ್ರೀನಾಥ್..
ಬೆಂಗಳೂರು : ಶಿಕ್ಷಣವೇ ನಿಮ್ಮ ಭವಿಷ್ಯದ ಭದ್ರ ಬುನಾದಿ. ನಮ್ಮ ಜೀವನದಲ್ಲಿ ಯಾವುದೇ ಪರಿಸ್ಥಿತಿ ಇದ್ದರೂ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ನಗರದ ಸದ್ದು ಗುಂಟೆ ಪಾಳ್ಯದ ಸಮಾಜ ಸೇವಕಿ, ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ಕವಿತಾ ಕಲ್ಪತರು ಫೌಂಡೇಶನ್ ಮುಖ್ಯಸ್ಥೆ ಕವಿತಾ ಶ್ರೀನಾಥ್ ಕರೆ ನೀಡಿದರು.
ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಬಡ ಸಾವಿರಾರು ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬ್ಯಾಗ್‌ಗಳನ್ನು ವಿತರಣೆ ಮಾಡಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಬ್ಯಾಗ್‌ಗಳು ಕೇವಲ ಶೈಕ್ಷಣಿಕ ಸಾಮಗ್ರಿಗಳಲ್ಲ, ಬದಲಿಗೆ ನಿಮ್ಮ ಕನಸುಗಳನ್ನು ಹೊತ್ತುಕೊಂಡು ಹೋಗುವ ಸಾಧನಗಳು. ಈ ಸಣ್ಣ ಬ್ಯಾಗ್‌ಗಳು ಕೇವಲ ಬಟ್ಟೆಯ ಚೀಲಗಳಲ್ಲ. ಪ್ರತಿಯೊಂದು ಪುಸ್ತಕವೂ ನಿಮಗೆ ಜ್ಞಾನವನ್ನು ಕೊಡುತ್ತದೆ. ನೀವು ಓದುವ ಪ್ರತಿ ಪುಟವೂ ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತದೆ. ನಿಮ್ಮಲ್ಲಿ ಅನೇಕರು ಕಷ್ಟದಲ್ಲಿ ಬೆಳೆಯುತ್ತಿದ್ದೀರಿ. ಆದರೆ ನೆನಪಿಡಿ – ಕಷ್ಟವೇ ನಿಮ್ಮನ್ನು ಬಲಶಾಲಿಯಾಗಿಸುತ್ತದೆ. ಶಿಕ್ಷಣವೇ ನಿಮ್ಮ ಅತ್ಯುತ್ತಮ ಆಯುಧ. ಅದನ್ನು ಎಂದಿಗೂ ಕೈ ಬಿಡಬೇಡಿ ಎಂದು ಪ್ರೇರಣೆ ತುಂಬಿದರು.
ಇಂದಿನ ಮಕ್ಕಳೇ ನಾಳೆಯ ಒಳ್ಳೆಯ ನಾಗರಿಕರು, ಹೀಗಾಗಿ ನೀವೇ ಭವಿಷ್ಯದ ಭಾರತವನ್ನು ಕಟ್ಟುವವರು. ನಿಮ್ಮಿಂದಲೇ ನಮ್ಮ ಸಮಾಜ ಬದಲಾಗುವ ನಿರೀಕ್ಷೆ ಇಟ್ಟುಕೊಂಡವರು ನಾವು. ಬದುಕಿನಲ್ಲಿ ಎಷ್ಟೇ ದೊಡ್ಡ ಕಷ್ಟ ಎದುರಾದರೂ ಮಕ್ಕಳನ್ನು ಶಾಲೆಯಿಂದ ದೂರ ಮಾಡಬೇಡಿ, ಇಂದಿನ ಶಿಕ್ಷಣವೇ ನಾಳಿನ ಬದುಕಿಗೆ ಆಧಾರ ಎಂದು ನೆರೆದಿದ್ದ ಪೋಷಕರಲ್ಲಿ ಮನವಿ ಮಾಡಿದರು.
ಒಂದಿಲ್ಲೊಂದು ರೀತಿಯಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಕವಿತಾ ಶ್ರೀನಾಥ್ ಅವರು ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ. ಆಟೋ ಚಾಲಕರ ಸಂಕಷ್ಟದ ಸಮಯದಲ್ಲಿ ನೆರವಾಗುವುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಸದ್ದು ಗುಂಟೆ ಪಾಳ್ಯದಲ್ಲಿ ಜನಮಾನಸದಲ್ಲಿ ಉಳಿಯುವಂತ ಅನೇಕ ಜನಪರ ಕಾರ್ಯಗಳಿಂದ ಹೆಸರುವಾಸಿಯಾಗಿರುವ ಅಪರೂಪದ ಸಮಾಜ ಸೇವಕಿಯಾಗಿದ್ದಾರೆ.
ಇನ್ನೂ ಮಕ್ಕಳಿಗೆ ಬ್ಯಾಗ್ ವಿತರಿಸಿ ಕವಿತಾ ಶ್ರೀನಾಥ್ ದಂಪತಿ ಮಕ್ಕಳೊಂದಿಗೆ ಕೆಲ ಕಾಲ ಬೆರೆತು ನೋವು ನಲಿವುಗಳನ್ನು ಆಲಿಸಿದರು. ಕವಿತಾ ಶ್ರೀನಾಥ್ ಅವರ ಶೈಕ್ಷಣಿಕ ತುಡಿತ, ಮಿಡಿತ ಹಾಗೂ ಶಿಕ್ಷಣ ಪ್ರೇಮಕ್ಕೆ ಪೋಷಕರು, ವಿದ್ಯಾರ್ಥಿಗಳು ಧನ್ಯವಾದಗಳನ್ನು ಅರ್ಪಿಸಿದರು.



