ಕಿವುಡ ಮೂಗರ ಶಾಲೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ:ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ರೋಟರಿ ಕಿವುಡ ಮೂಗರ ಶಾಲೆ ಮಕ್ಕಳಲ್ಲಿ ಆತ್ಮವಿಶ್ವಾಸ ಅವರ ತಂದೆ ತಾಯಿಗಳಲ್ಲಿ ಆಸೆ ಹುಟ್ಟಿಸುವ ಕೆಲಸ ಮಾಡಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ಡಾ. ಪಿ.ವಿ.ದತ್ತಿ ರೋಟರಿ ಕಿವುಡ ಮಕ್ಕಳ ಶಾಲೆಯಲ್ಲಿ ದಿವಂಗತ ಶ್ರೀ ಎಸ್ ಆರ್ ಬೊಮ್ಮಾಯಿರವರ 102 ನೇಯ ಜನ್ಮದಿನೋತ್ಸವದ ಅಂಗವಾಗಿ ಮಕ್ಕಳಿಗೆ ನೋಟ ಪುಸ್ತಕ ಹಾಗೂ ಸಿಹಿ ಹಂಚುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಮಾಜಿ ಮುಖ್ಯಮಂತಿ, ಕೇಂದ್ರದ ಸಚಿವರಾಗಿಯೂ ಕೆಲಸ ಮಾಡಿದ್ದ ದಿ. ಎಸ್. ಆರ್. ಬೊಮ್ಮಾಯಿ ಅವರ 102 ಜನ್ಮ ದಿನಾಚರಣೆ ಅವರ ಹುಟ್ಟಿದ ಹಬ್ಬವನ್ನು ಯಾಕೆ ಆಚರಿಸುತ್ತಿದ್ದೇವೆ ಎಂದರೆ ಅವರು ರೋಟರಿ ಅಧ್ಯಕ್ಷರಾಗಿದ್ದಾಗ ಕಿವುಡ ಮೂಗರ ಶಾಲೆ ತೆರೆಯುವ ಯೋಜನೆಯನ್ನು ಜಾರಿಗೆ ತಂದರು. ಡಾ. ಪಿ.ವಿ. ದತ್ತಿ ಅವರು ಇದಕ್ಕೆ ಕಾರಣೀಭೂತರು, ಡಾ. ನಾಡಿಗ್ ಅವರು ಕಿವುಡ ಮೂಗರ ಶಾಲೆ ತೆರೆಯೋಣ ಅಂತ ಸಲಹೆ ಕೊಟ್ಟರು. ಆಗ ಆರಂಭವಾದ ಶಾಲೆ ಈಗ ಬೃಹದಾಕಾರವಾಗಿ ಬೆಳೆದಿದೆ. ಈ ಥರದ ಒಂದು ಸಂಸ್ಥೆ ಬೇಕಿತ್ತು. ಹುಬ್ಬಳ್ಳಿಯಲ್ಲಿ ಇಷ್ಟು ಅಚ್ಚುಕಟ್ಟಾದ ಸಂಸ್ಥೆ ಇಲ್ಲ. ಈ ಸಂಸ್ಥೆ ಮೂಗ ಮತ್ತು ಕಿವುಡ ಮಕ್ಕಳಲ್ಲಿ ಆತ್ಮವಿಶ್ವಾಸ ಅವರ ತಂದೆ ತಾಯಿಗಳಲ್ಲಿ ಆಸೆ ಹುಟ್ಟಿಸುವ ಕೆಲಸ ಮಾಡಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಡಾ. ದತ್ತಿ ಅವರ ಆತ್ಮವಿಶ್ವಾಸ ಮತ್ತು ಉತ್ಸಾವ ಈಗಲೂ ಇದೆ. ಅದು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ರಾಜಕಾರಣಿಗಳಲ್ಲಿ ಹುಟ್ಟು ಹಬ್ಬ ಸಂಭ್ರಮಾಚರಣೆ ಮಾಡುವುದು ಸಾಮಾನ್ಯ, ಆದರೆ, ಎಸ್.ಆರ್. ಬೊಮ್ಮಾಯಿಯವರಿಗೆ ಈ ಶಾಲೆ ಬಗ್ಗೆ ಅತ್ಯಂತ ಪ್ರೀತಿ ಇತ್ತು. ಬೊಮ್ಮಾಯಿಯವರು ಮಲಪ್ರಭಾ ನೀರು ತಂದಿದ್ದಾರೆ. ಅನೇಕ ಕೆಲಸ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸೇವೆ ಮಾಡುವ ಸೌಭಾಗ್ಯ ದೊರೆಯಿತು. ನಾವೆಲ್ಲರೂ ತಂದೆ ತಾಯಿಯ ಮಕ್ಕಳಾದರೆ ಅವರೆಲ್ಲ ದೇವರ ಮಕ್ಕಳು ಅವರ ಸೇವೆ ಮಾಡುವುದರಿಂದ ಪುಣ್ಯ ಬರುತ್ತದೆ. ಅವಕಾಶ ಸಿಕ್ಕಾಗೆಲ್ಲ ಒಳ್ಳೆಯ ಕೆಲಸ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿ ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ಹಣ ಕೊಟ್ಟಿದ್ದೇನೆ. ಹುಬ್ಬಳ್ಳಿ ಧಾರವಾಡ ಅಭಿವೃದ್ಧಿಗೆ 500 ಕೋಟಿಗಿಂತ ಹೆಚ್ಚು ಕೊಟ್ಟಿದ್ದೇನೆ. ಕ್ಯಾನ್ಸರ್ ಆಸ್ಪತ್ರೆಗೆ 10 ಕೋಟಿ ಕೊಟ್ಟಿದ್ದೇನೆ. ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಆದರೆ, ಈ ಶಾಲೆಗೆ ಸಹಾಯ ಮಾಡಿದ್ದು ಅತ್ಯಂತ ಹೃದಯಕ್ಕೆ ಹತ್ತಿರವಾಗಿರುವ ಕೆಲಸ. ಇಲ್ಲಿ ಸಂಪೂರ್ಣ ಹಣ ಬಳಕೆಯಾಗಿದೆ. ಮುಂದೆಯೂ ಕೂಡ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹಿರಿಯರಾದ ಡಾ.ಪಿ.ವಿ ದತ್ತಿ ಎಂ.ಕೆ.ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


