ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ
ರೈತರಿಗೆ ಹಾಗೂ ಸೂಕ್ಷ್ಮ ಉದ್ಯಮಿಗಳಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸಬೇಕು. ರೈತರನ್ನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದು: ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ ಮೇ 27: ಜಿಲ್ಲೆಯಲ್ಲಿ ಕೃಷಿ ಹಾಗೂ ಕೈಗಾರಿಕೆಗಳಿಗೆ ಪೂರಕವಾದ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ, ಪ್ರೋತ್ಸಾಹಿಸಲು ಜಿಲ್ಲೆಯ ಎಲ್ಲ ಬ್ಯಾಂಕ್‍ಗಳು ಸಹಕರಿಸಬೇಕು. ಸರ್ಕಾರದ ನಿರ್ದೇಶನ ನೀಡಿ, ಹಾಗೂ ಆರ್‍ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಸಾಲ ವಸೂಲಾತಿಯನ್ನು ಮಾಡಬಾರದೆಂದು ಜಿಲ್ಲಾಧಿಕಾರಿ ಹಾಗೂ ಸಮಿತಿಯ ಸಹ ಅಧ್ಯಕ್ಷರಾಗಿರುವ ಸ್ನೇಹಲ್ ಆರ್. ಅವರು ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು (ಮೇ.27) ಬೆಳಿಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧಿಕಾರಿ ಅವರ ಸಹಾಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿ.ಎಲ್.ಆರ್.ಸಿ) ಸಭೆ ಜರುಗಿತು. ಸಭೆಯಲ್ಲಿ 2025-26ನೇ ಸಾಲಿನ ವಿವಿಧ ಸಾಲಸಂಬಂಧಿತ ಸರ್ಕಾರಿ ಯೋಜನೆಗಳ ಪ್ರಗತಿ ಹಾಗೂ ಆದ್ಯತಾ ವಲಯ ಸಾಲ ವಿತರಣೆ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಹಾಗೂ ಸಮಿತಿಯ ಸಹ ಅಧ್ಯಕ್ಷರಾಗಿರುವ ಸ್ನೇಹಲ್ ಆರ್. ಅವರು ಮಾತನಾಡಿ, ರೈತರು ಹಾಗೂ ಸ್ವಯಂ ಉದ್ಯೋಗಿಗಳು ಸಾಲ ವಸೂಲಾತಿಯಲ್ಲಿ ತಾರತಮ್ಯ ಮಾಡುತ್ತಿದ್ದು, ಸರ್ಕಾರದಿಂದ ಸಿಗುವ ಸಬ್ಸಿಡಿ ಹಣವನ್ನು ಸಾಲದ ಮೊತ್ತಕ್ಕೆ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಅನೇಕರು ದೂರು ನೀಡುತ್ತಿದ್ದಾರೆ. ಈ ಕುರಿತು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಸಹಾಯಧನದ ಹಣವನ್ನು ಯಾವುದೇ ಕಾರಣಕ್ಕೂ ಸಾಲಕ್ಕೆ ಹೊಂದಾಣಿಕೆ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸರ್ಕಾರ ಹಲವು ಬ್ಯಾಂಕುಗಳನ್ನು ಸ್ಥಾಪಿಸಿರುವ ಉದ್ದೇಶ ಜನರಿಗೆ ನೆರವಾಗುವುದು ಮತ್ತು ಉದ್ಯಮ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಾಗಿದೆ. ರೈತರಿಗೆ ಹಾಗೂ ಸಣ್ಣ ಉದ್ಯಮಿಗಳಿಗೆ ತೊಂದರೆಯಾಗದಂತೆ ಬ್ಯಾಂಕ್ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಅವರು ತಿಳಿಸಿದರು.
ಬ್ಯಾಂಕ್‍ಗಳು ಗ್ರಾಮ ಪಂಚಾಯತಿ ಹಾಗೂ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ, ರೈತರಿಗೆ ಸಾಲ ಮರುಪಾವತಿ ಕುರಿತು ಜಾಗೃತಿ ಮೂಡಿಸಬೇಕು. ಸಾಲ ಮನ್ನಾ ಆಗುವ ನಿರೀಕ್ಷೆಯಲ್ಲಿ ಕಾಯದೆ ಸಾಧ್ಯವಾದಷ್ಟು ಸಾಲ ತೀರಿಸುವಂತೆ ಪ್ರೇರೆಪಿಸಬೇಕು ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಮ್‍ಇಜಿಪಿ) ಯೋಜನೆಯಡಿ ಇನ್ನೂ 142 ಅರ್ಜಿಗಳು ಬ್ಯಾಂಕುಗಳಲ್ಲಿ ಬಾಕಿ ಇವೆ. ಸಂಬಂಧಿತ ಬ್ಯಾಂಕುಗಳು ಅವುಗಳನ್ನು ಆದ್ಯತೆಯ ಮೇರೆಗೆ ತಕ್ಷಣ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೈತರಿಗೆ ಹಾಗೂ ಸೂಕ್ಷ್ಮ ಉದ್ಯಮಿಗಳಿಗೆ ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸಬೇಕು. ರೈತರನ್ನು ಯಾವುದೇ ರೀತಿಯಲ್ಲಿ ಕಿರುಕುಳ ನೀಡಬಾರದು. ಇಲ್ಲವಾದಲ್ಲಿ ಅವರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಬ್ಯಾಂಕುಗಳಿಗೆ ಎಚ್ಚರಿಕೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಸಾರ್ವಜನಿಕರು ಸಾಲ ಪಡೆಯಲು ಅರ್ಜಿಗಳನ್ನು ಸಲ್ಲಿಸಿದಾಗ ಬ್ಯಾಂಕುಗಳು ಸರಿಯಾಗಿ ಸ್ಪಂದಿಸಿ, ಶೀಘ್ರಗತಿಯಲ್ಲಿ ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಾಲ ಮಂಜೂರಾತಿಯಲ್ಲಿ ಅನಗತ್ಯ ವಿಳಂಬವಾದರೆ, ಜನರು ಖಾಸಗಿ ಫೈನಾನ್ಸ್ ಸಂಸ್ಥೆಗಳ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬ್ಯಾಂಕುಗಳು ಸಾರ್ವಜನಿಕರಿಗೆ ಅನುಕೂಲಕರವಾಗಿ ಸ್ಪಂದಿಸಿ, ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಚಿಕ್ಕ ಉದ್ಯಮಿಗಳಿಗೆ ಸಾಲ ಮಂಜೂರಾತಿಯಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಸಣ್ಣ ಸಣ್ಣ ಕಾರಣಗಳಿಗೆ ಜನರನ್ನು ಅಲೆದಾಡಿಸದೇ, ಕಡಿಮೆ ಅವಧಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ ಸಾಲ ಮಂಜೂರು ಮಾಡಬೇಕು ಎಂದು ಅವರು ಸೂಚಿಸಿದರು.
ಉದ್ಯೋಗಿನಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಬ್ಯಾಂಕುಗಳು ಸಮಯಕ್ಕೆ ಸರಿಯಾಗಿ ಸಾಲ ನೀಡಬೇಕು. ಸಬ್ಸಿಡಿ ಹಣ ಬರುವವರೆಗೆ ಕಾಯಬಾರದು. ವಾಹನ ಸಬ್ಸಿಡಿ ಯೋಜನೆಗಳನ್ನು ಹೊರತುಪಡಿಸಿ, ಬ್ಯಾಂಕುಗಳು ಮಂಜೂರಾದ ಸಾಲದ ಮೊತ್ತವನ್ನು ಮೊದಲು ಬಿಡುಗಡೆ ಮಾಡಬೇಕು. ಸರಕಾರಿ ಯೋಜನೆಗಳ ಅಡಿಯಲ್ಲಿ ಸಾಲ ಪಡೆಯುವ ಫಲಾನುಭವಿಗಳಿಗೆ ಸಿವಿಲ್ ಸ್ಕೋರ್ ಕಡ್ಡಾಯಗೊಳಿಸಬಾರದು ಎಂದು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಸೂಚಿಸಿದರು.
ಕೃಷಿ ಅವಧಿ ಸಾಲವನ್ನು ಬ್ಯಾಂಕುಗಳು ಕೃಷಿಯ ಕೋರ್ ಚಟುವಟಿಕೆಗಳಿಗಿಂತ ನಾನ್-ಕೋರ್ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದನ್ನು ಸೂಚಿಸಿ, ಮುಂದಿನ ದಿನಗಳಲ್ಲಿ ಕೋರ್ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವಂತೆ ನಿರ್ದೇಶನ ನೀಡಿದರು. ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಬಾಕಿ ಇರುವ ಸಾಲ ವಿತರಣೆ ಪ್ರಕರಣಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಬ್ಯಾಂಕರಿಗೆ ಸೂಚಿಸಿದರು.
ನಾಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬಳೆ ಅವರು ಮಾತನಾಡಿ, ಕಳೆದ ಹಣಕಾಸು ವರ್ಷದಲ್ಲಿ ಜಿಲ್ಲೆಯ ಒಟ್ಟು ಸಾಲ ವಿತರಣೆ 11,800 ಕೋಟಿಯಿಂದ 14,800 ಕೋಟಿಗೆ ಏರಿಕೆಯಾಗಿದ್ದು, 3,000 ಕೋಟಿಗಳ ಹೆಚ್ಚಳ ದಾಖಲಾಗಿದೆ. ಇದರಲ್ಲಿ ಎಂಎಸ್‍ಎಂಇ ಕ್ಷೇತ್ರದಲ್ಲಿ 1,500 ಕೋಟಿ ಹಾಗೂ ಕೃಷಿ ಕ್ಷೇತ್ರದಲ್ಲಿ 1,000 ಕೋಟಿಗಳ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಪಿಎಂ ಸೂರ್ಯಘರ್ ಯೋಜನೆ ಸೇರಿದಂತೆ ಸೌರಶಕ್ತಿ ಆಧಾರಿತ ಘಟಕಗಳಿಗೆ ಬ್ಯಾಂಕುಗಳ ಮೂಲಕ ಹೆಚ್ಚಿನ ಹಣಕಾಸು ಸೌಲಭ್ಯ ಒದಗುತ್ತಿರುವುದರಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲೂ ಉತ್ತಮ ಪ್ರಗತಿ ಕಂಡುಬಂದಿದೆ. ನವಲಗುಂದ ಹಾಗೂ ಅಣ್ಣಿಗೇರಿ ಭಾಗಗಳಲ್ಲಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಎಐಎಫ್ ಹಾಗೂ ಪಿಎಂಎಫ್‍ಎಂಇ ಯೋಜನೆಗಳು ಸೆಪ್ಟೆಂಬರ್ 30, 2026 ರವರೆಗೆ ಮಾತ್ರ ಜಾರಿಯಲ್ಲಿರುವುದರಿಂದ, ಆ ಅವಧಿಯೊಳಗೆ ಹೆಚ್ಚು ಹೆಚ್ಚು ಸಾಲ ಮಂಜೂರು ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಐದು ವರ್ಷಗಳ ಅವಧಿಗೆ ಸಮಗ್ರ ಕೃಷಿ ಪದ್ಧತಿ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಕೆವಿಜಿಬಿ ಬ್ಯಾಂಕಿನ 10 ಶಾಖೆಗಳನ್ನು ಗುರುತಿಸಲಾಗಿದೆ. ಧಾರವಾಡ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ಭಾಗಗಳಲ್ಲಿ 15 ಸಾವಿರ ರೈತರನ್ನು ಒಳಗೊಂಡಂತೆ 225 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುμÁ್ಠನಗೊಳ್ಳಲಿದೆ ಎಂದು ಅವರು ಹೇಳಿದರು.
ಸಮಗ್ರ ಕೃಷಿ ಪದ್ಧತಿ ಯೋಜನೆಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ರೈತರಿಗೆ ಜಾಗೃತಿ ಮೂಡಿಸಬೇಕು. ಒಂದು ಘಟಕಕ್ಕೆ 10 ಲಕ್ಷದಿಂದ 50 ಲಕ್ಷದವರೆಗೆ ಯೋಜನೆ ರೂಪಿಸಬಹುದಾಗಿದ್ದು, ನಬಾರ್ಡ್ ವತಿಯಿಂದ 1.5 ಲಕ್ಷದವರೆಗೆ ಸಬ್ಸಿಡಿ ದೊರೆಯಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸ್ವಾಗತಿಸಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಗಡಾದವರ ಮಾತನಾಡಿ, 2025-26ನೇ ಹಣಕಾಸು ವರ್ಷದಲ್ಲಿ ಜಿಲ್ಲೆಯ ಬ್ಯಾಂಕುಗಳು ರೂ. 13,790.44 ಕೋಟಿಗಳ ಗುರಿಯ ವಿರುದ್ಧ ರೂ.14,827.36 ಕೋಟಿ ಸಾಲ ವಿತರಣೆ ಮಾಡಿ ಗುರಿ ಮೀರಿ ಸಾಧನೆ ಮಾಡಿವೆ. ಆದ್ಯತಾ ವಲಯಕ್ಕೆ ರೂ. 16,167.83 ಕೋಟಿಗಳ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಆರ್.ಬಿ.ಐ ಸಹಾಯಕ ಮಹಾಪ್ರಬಂಧಕ ಅರುಣ ಹಾಗೂ ಬ್ಯಾಂಕ್ ಆಫ್ ಬರೋಡಾ ಹುಬ್ಬಳ್ಳಿ ಶಾಖೆಯ ಸಹಾಯಕ ಮಹಾಪ್ರಬಂಧಕ ಹರ್ಷಾ ಅವರು ಇದ್ದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಧಾರವಾಡವು 2026-27ನೇ ಸಾಲಿನ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ವಿವಿಧ ಬ್ಯಾಂಕುಗಳ ಜಿಲ್ಲಾ ಮಟ್ಟದ ವ್ಯವಸ್ಥಾಪಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.



