ಜವಾಬ್ದಾರಿ ವಹಿಸಿರುವ ಜಿಲ್ಲೆಗಳಿಗೆ ತೆರಳಿ ಅತಿವೃಷ್ಟಿ, ಅನಾವೃಷ್ಟಿ ಪರಿಶೀಲಿಸಿ ವರದಿ ನೀಡಲು ನೂತನ ಸಚಿವರಿಗೆ ಸೂಚನೆ
ನಾಳೆ ಒಂದು ದಿನ ಹೊರತುಪಡಿಸಿ, ಬುಧವಾರದಿಂದ ನೂತನ ಸಚಿವರು ತಮಗೆ ಜವಾಬ್ದಾರಿ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಪೀಡಿತ ಸ್ಥಳಗಳನ್ನು ಪರಿಶೀಲಿಸಬೇಕು ಮತ್ತು ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ.
ನಮ್ಮ ಮುಂದಿರುವ ಸವಾಲುಗಳು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ. ಬರಗಾಲ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ನೀರಿನ ಸಮಸ್ಯೆ ಬಗ್ಗೆಯೂ ಚರ್ಚೆಯಾಗಿದೆ. ಈಗ ಮಳೆಯಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆಯಾಗಿರಬಹುದು, ಆದರೆ ಭೀಕರ ಕಂಟಕವೊಂದು ಎದುರಾಗಿತ್ತು. ದೇವರ ಕೃಪೆಯಿಂದ ಸದ್ಯಕ್ಕೆ ಅದು ನಿವಾರಣೆಯಾಗಿದೆ. ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಲಾಗಿತ್ತು, ಆದರೆ ನಾವು 30 ಸಾವಿರ ಕ್ಯೂಸೆಕ್ ನೀರು ಹರಿಸುವಂತಾಗಿದೆ.
ಕೆ.ಆರ್.ಎಸ್ ಹಾಗೂ ಹೇಮಾವತಿ ಜಲಾಶಯಗಳು ಇನ್ನೂ ತುಂಬಿಲ್ಲ, ಆದರೆ ಒಳಹರಿವು ಹೆಚ್ಚಿದೆ. ಮಲೆನಾಡಿನಲ್ಲಿ ಮಳೆಯಾಗುತ್ತಿದ್ದು, ತುಂಗಭದ್ರಾ ಜಲಾಶಯಕ್ಕೆ ಇನ್ನೂ ನೀರು ಹರಿದುಬರಬೇಕಿದೆ. ಆಲಮಟ್ಟಿಯಲ್ಲಿ ನೀರಿನ ಹರಿವು ಉತ್ತಮವಾಗಿದೆ. ಆದರೂ ಬರಗಾಲದ ಛಾಯೆ ಇನ್ನೂ ಇದೆ. ಮಳೆಯಿಂದಾಗಿ ಶಿವಮೊಗ್ಗ, ತೀರ್ಥಹಳ್ಳಿ ಭಾಗದಲ್ಲಿ ಅನಾಹುತಗಳಾಗಿವೆ. ಈ ಬಗ್ಗೆ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡಲಾಗುವುದು.
ಸಚಿವ ಸಂಪುಟ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಾಯಕರ ಮೂಲಕವೇ ಪರಿಹಾರ ಘೋಷಣೆ ಮಾಡಿಸಲು ತೀರ್ಮಾನಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಈ ಹಿಂದೆ ಕಂದಾಯ ಸಚಿವರಾಗಿದ್ದವರು ಮತ್ತು ಸಾಕಷ್ಟು ಅನುಭವಿಗಳು. ಅವರಿಗೆ ಸಮಯ ಬಂದಾಗ ಉತ್ತರ ನೀಡುತ್ತೇವೆ.
ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರಗಿ ವಿಭಾಗಗಳಲ್ಲಿ ಸಭೆ ನಡೆಸಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ನಡೆಸಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಬೇಕು, ಆ ವರದಿಯ ಆಧಾರದ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳನ್ನು ಜೊತೆಗೆ ಕರೆದುಕೊಂಡು ಹೋಗಿ ಪರಿಸ್ಥಿತಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮಾಹಿತಿ ಬಂದಿದ್ದು, ಕಾನೂನು ತಜ್ಞರ ಜೊತೆ ಚರ್ಚಿಸಿ ಅವರಿಗೆ ಕಾನೂನಾತ್ಮಕವಾಗಿಯೇ ಉತ್ತರ ನೀಡಲಾಗುವುದು. ಅವರ ಹಕ್ಕನ್ನು ನಾನು ಪ್ರಶ್ನೆ ಮಾಡುವುದಿಲ್ಲ, ಆದರೆ ನಾವು ದೇಶದ ಕಾನೂನನ್ನು ಗೌರವಿಸುತ್ತೇವೆ. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಕಾರಣಕ್ಕಾಗಿ ನಾವು ತಕ್ಷಣವೇ ಯಾವುದೇ ತೀರ್ಮಾನ ಮಾಡಿರಲಿಲ್ಲ. ಈ ವಿಚಾರದಲ್ಲಿ ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸಹಕಾರ ನೀಡಿವೆ ಮತ್ತು ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದೆ. ಭವಿಷ್ಯದಲ್ಲೂ ಅವರು ನಮ್ಮ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಸಹಕಾರ ನೀಡಿರುವ ನಮ್ಮ ರಾಜ್ಯದ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.
ಶ್ರೀ ಪ್ರಲ್ಹಾದ್ ಜೋಶಿಯವರು ಸಂಸದರ ನಿಯೋಗವನ್ನು ಕೇಂದ್ರ ಸಚಿವರ ಬಳಿಗೆ ಕೊಂಡೊಯ್ದು ಮನವಿ ಮಾಡಿದ್ದಾರೆ. ವರುಣ ದೇವರ ಕೃಪೆ ಕೂಡ ನಮ್ಮ ಮೇಲಿದೆ. ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿಯೇ ಪಾಲನೆ ಮಾಡುತ್ತಿದ್ದೇವೆ. ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ 15 ದಿನಗಳಿಗೊಮ್ಮೆ ಸಭೆ ನಡೆಸಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಿವೆ. ನಾವು ಪ್ರಾಧಿಕಾರಕ್ಕೆ ನಮ್ಮ ನೈಜ ಪರಿಸ್ಥಿತಿಯನ್ನು ವಿವರಿಸಲಿದ್ದೇವೆ.



