ಬಿಜೆಪಿ ಷಡ್ಯಂತ್ರದಿಂದ ವಿನಯ್ ಕುಲಕರ್ಣಿಗೆ ಸಂಕಷ್ಟ: ಡಿಸಿಎಂ ಡಿ.ಕೆ. ಶಿವಕುಮಾರ್
ಮೇಲ್ಮನವಿಗೆ ಅವಕಾಶವಿದೆ, ರಾಜಕೀಯದಲ್ಲಿ ಇಂತಹ ಹೋರಾಟ ಮಾಡಲೇಬೇಕು
ಸಿದ್ದರಾಮಯ್ಯ ಅವರೇ ನನ್ನ ತಂಡ ಎಂದರೆ ನಂಬಬಹುದು
ನವದೆಹಲಿ,
“ಬಿಜೆಪಿ ಷಡ್ಯಂತ್ರದಿಂದ ವಿನಯ್ ಕುಲಕರ್ಣಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ರಾಜಕಾರಣದಲ್ಲಿ ಇಂತಹ ಹೋರಾಟ ಮಾಡಲೇಬೇಕು, ಅವರು ಹೋರಾಟ ಮಾಡುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿರುವ ಬಗ್ಗೆ ಕೇಳಿದಾಗ, “ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ಇಲ್ಲಿ ದೊಡ್ಡ ಒಳಸಂಚು ನಡೆದಿದೆ. ಬಿ ರಿಪೋರ್ಟ್ ಸಲ್ಲಿಕೆ ವೇಳೆ ಸಿಬಿಐ ತನಿಖೆ ನಡೆಸಿ ಕಿರುಕುಳ ನೀಡಲಾಗಿದೆ. ಒಳಸಂಚಿನಲ್ಲಿ ವಿನಯ್ ಕುಲಕರ್ಣಿ ಅವರನ್ನೂ ಸಿಲುಕಿಸಲಾಗಿದೆ. ಮೇಲ್ಮನವಿಗೆ ಇನ್ನು 30 ದಿನಗಳ ಕಾಲಾವಕಾಶವಿದ್ದು, ನಾನು ಅವರ ಕುಟುಂಬದ ಜತೆ ಚರ್ಚೆ ಮಾಡಿದ್ದೇನೆ. ಅವರು ನಂಬಿರುವ ದೇವರ ಮೇಲೆ ಸತ್ಯ ಮಾಡಿ, ನಾನು ಈ ತಪ್ಪು ಮಾಡಿಲ್ಲ ಎಂದಿದ್ದಾರೆ. ನನಗೆ ಇವತ್ತಿಗೂ ಅವರ ಮೇಲೆ ನಂಬಿಕೆ ಇದೆ. ಶಿಕ್ಷೆ ಪ್ರಕಟಣೆ ಬಗ್ಗೆ ಗೌರವ ನೀಡಬೇಕು. ನನ್ನ ಪ್ರಕಾರ ಅವರು ತಪ್ಪು ಮಾಡಿಲ್ಲ. ಅವರ ಕುಟುಂಬದ ಜತೆ ನಾನು ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವುದು. ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ. ನನ್ನ ವಿಚಾರದಲ್ಲೂ ಅನೇಕ ಸಂಚು ನಡೆಯಿತು. ನಾನು ಸಾಕಷ್ಟು ಅನುಭವಿಸಿದೆ. ಕೊನೆಗೆ ನನಗೆ ನ್ಯಾಯ ಸಿಕ್ಕಿದ್ದು ಸುಪ್ರೀಂ ಕೋರ್ಟ್ ನಲ್ಲಿ. ಈ ಪ್ರಕರಣದಲ್ಲೂ ಮೇಲಿನ ಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ” ಎಂದರು.
ಯಾರ ಒಳಸಂಚು ಇದೆ ಎಂದು ಕೇಳಿದಾಗ, “ಸಮಯ ಬಂದಾಗ ಹೇಳುತ್ತೇನೆ. ಸಿಬಿಐ ತನಿಖೆ ನೀಡುವ ಅಗತ್ಯ ಏನಿತ್ತು? ಸಿಬಿಐಗೆ ಪ್ರಕರಣ ಕೊಡಿಸುವೆ ಎಂದು ಹೇಳುವ ಸಂದರ್ಭ ಏನಿತ್ತು? ನಾನು ಅವತ್ತೇ ಹೇಳಿದ್ದೆ ಎಂದು ಯಡಿಯೂರಪ್ಪನವರು ಹೇಳುತ್ತಿದ್ದಾರಲ್ಲಾ, ಮುಂಚಿತವಾಗಿ ಹೆಂಗೆ ಹೇಳಲಾಯಿತು? ಉತ್ತರ ಕರ್ನಾಟಕದಲ್ಲಿ ರಾಜಕೀಯವಾಗಿ ಒಬ್ಬ ನಾಯಕ ಶಕ್ತಿಯಾಗಿ ಬೆಳೆಯುತ್ತಿದ್ದಾನೆ ಎಂದು ಬಿಜೆಪಿಯವರು ಒಳಸಂಚು ಮಾಡಿದ್ದಾರೆ” ಎಂದರು.
ಸಿದ್ದರಾಮಯ್ಯ ಅವರೇ ನನ್ನ ತಂಡ ಎಂದರೆ ನಂಬಬಹುದು
ಹಿರಿಯ ಶಾಸಕರು ದೆಹಲಿಗೆ ಭೇಟಿ ನೀಡಿದ್ದ ಬಗ್ಗೆ ಕೇಳಿದಾಗ, “ಅದು ಅವರಿಗೆ ಬಿಟ್ಟ ವಿಚಾರ. ಆದರೆ ಅವರನ್ನು ಒಂದು ತಂಡ ಎಂದು ಹೇಳಲಾಗುತ್ತಿದೆ. ಅವರದ್ದು ಯಾವ ತಂಡವೂ ಇಲ್ಲ. ಇಲ್ಲಿ ಸಿದ್ದರಾಮಯ್ಯ ಅವರ ತಂಡವೂ ಇಲ್ಲ, ಡಿ.ಕೆ. ಶಿವಕುಮಾರ್ ತಂಡವೂ ಇಲ್ಲ. ಸ್ವತಃ ಸಿದ್ದರಾಮಯ್ಯನವರೇ ಇದು ನನ್ನ ತಂಡ ಎಂದು ಹೇಳಿದಾಗ ಅದು ಅವರ ತಂಡ ಎಂದು ಒಪ್ಪಬಹುದು. ಈ ವಿಚಾರವನ್ನು ಸಿದ್ದರಾಮಯ್ಯನವರೂ ಹೇಳುತ್ತಿಲ್ಲ, ನಾನು ಹೇಳುತ್ತಿಲ್ಲ. ಜಯಚಂದ್ರ ಅವರು 1978ರಲ್ಲಿ ಶಾಸಕರಾಗಿದ್ದು ಸಿದ್ದರಾಮಯ್ಯ ಅವರಿಗಂತ ಮುಂಚಿತವಾಗಿ ಬಂದವರು ಅವರನ್ನು ಸಿದ್ದರಾಮಯ್ಯ ತಂಡ ಎಂದು ಹೇಳಲು ಆಗುತ್ತದೆಯೇ?” ಎಂದು ತಿಳಿಸಿದರು.
ದೆಹಲಿಗೆ ಬಂದು ಸಚಿವ ಸಂಪುಟ ಪುನರಚನೆ ಮಾಡಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಕೇಳಿದಾಗ, “ಈ ವಿಚಾರವಾಗಿ ಸಿಎಂ ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.


