ಬೆಂಗಳೂರು: ರಾಜ್ಯದ ದೊಡ್ಡ ಕುಟುಂಬವಾಗಿ ಗುರುತಿಸಿಕೊಂಡಿರುವ, ಉತ್ತರ ಕರ್ನಾಟಕದ ಹುಲಿ ದಿ. ವಿ. ಎಲ್. ಪಾಟೀಲ್ ಅವರ ಕುಟುಂಬ ನಮ್ಮ ಭಾಗದ ಹೆಮ್ಮೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಡಾ. ಮಹಾಂತೇಶ ಕಡಾಡಿ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಶುಕ್ರವಾರ ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದರು.
ಸ್ವಾತಂತ್ರ್ಯದ ಇತಿಹಾಸ ಪುಟಗಳಲ್ಲಿ ಪಾಟೀಲರ ಕುಟುಂಬದ ಹೆಸರು ಅಚ್ಚಳಿಯದೆ ಉಳಿದಿದೆ. ಈ ದೇಶ ಕಂಡ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜೊತೆಗೆ ದೇಶಕ್ಕಾಗಿ ತ್ಯಾಗ ಮಾಡುವ ಮೂಲಕ ಜೀವನವನ್ನೇ ತೇಯ್ದ ಅಪರೂಪದ ಕುಟುಂಬವಾಗಿದೆ ಎಂದು ಎಂದು ಸ್ಮರಿಸಿದರು.
ಇದಲ್ಲದೆ ಸಾಮಾಜಿಕ ನ್ಯಾಯ, ಜನರ ಏಳಿಗೆ, ಬಡ ಮಕ್ಕಳ ಶಿಕ್ಷಣಕ್ಕಾಗಿ ತಮ್ಮದೇ ಆದ ಕೊಡುಗೆ ನೀಡಿರುವುದು ಈ ಕುಟುಂಬದ ಹೆಗ್ಗಳಿಕೆಯಾಗಿದೆ. ಈಗಲೂ ಸಹ ಅದೇ ಮಾರ್ಗದಲ್ಲಿ ವಸಂತರಾವ್ ಪಾಟೀಲರ ಸುಪುತ್ರ ಪ್ರತಾಪರಾವ್ ಪಾಟೀಲ್ ಅವರು ಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಗೋಕಾಕ ನಗರದ ಕಡೆಗೂ ಅವರ ವಿಶೇಷ ಗಮನವಿರಲಿ. ಇಲ್ಲಿಗೂ ಆ ಕುಟುಂಬದಿಂದ ಸಹಾಯ ಸಹಕಾರ ಇರಲಿ ಎಂದು ಡಾ. ಮಹಾಂತೇಶ ಕಡಾಡಿ ಮನವಿ ಮಾಡಿದರು.
ಕಡಾಡಿಗೆ ಜೆಡಿಎಸ್ ಟಿಕೆಟ್ ಸುಳಿವು..
ಗೋಕಾಕಿನ ಶಕ್ತಿ ದೇವತೆ ಮಹಾಲಕ್ಷ್ಮೀಯ ದರ್ಶನ ಪಡೆದು ಮಾತನಾಡಿದ ಪ್ರತಾಪರಾವ್ ಪಾಟೀಲ್, ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷನಾಗಿ ಪಕ್ಷದ ಬಲವರ್ಧನೆಗೆ ಪ್ರವಾಸ ಆರಂಭಿಸಿರುವೆ. ಈ ಹಿನ್ನೆಲೆಯಲ್ಲಿ ಗೋಕಾಕ ನಗರಕ್ಕೂ ಆಗಮಿಸಿದ್ದೇನೆ, ಇದರಲ್ಲೇನೂ ವಿಶೇಷತೆಯಿಲ್ಲ ಎಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆಯುವ ಸುಳಿವಿನ ಹಿನ್ನೆಲೆಯಲ್ಲಿ ಈ ಕ್ಷೇತ್ರದಿಂದ ಮಹಾಂತೇಶ ಕಡಾಡಿ ಅವರಿಗೆ ಕಾಣದ ಕೈಗಳ ಕೈವಾಡದಿಂದ ಕಾಂಗ್ರೆಸ್ ಟಿಕೆಟ್ ತಪ್ಪುವ ಸಾಧ್ಯತೆ ಇದೆ. ಒಂದುವೇಳೆ ಆ ರೀತಿಯ ಸನ್ನಿವೇಶ ಎದುರಾದರೆ, ಕಡಾಡಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿ ಚುನಾವಣಾ ಅಖಾಡಕ್ಕೆ ಇಳಿಸುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯ ಸ್ಪರ್ಧೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ನನಗೆ ಅದರಲ್ಲಿ ಎಷ್ಟು ಸದಸ್ಯರು ಇರುತ್ತಾರೆ. ಅಲ್ಲಿನ ಪ್ರಕ್ರಿಯೆಗಳು, ಬೋಗಸ್ ಮತದಾರರ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದರು. ನಾನು ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷನಾಗಿಯೇ ಮುಂದುವರಿಯುವೆ, ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಇದೇ ವೇಳೆ ಪ್ರತಾಪರಾವ್ ಪಾಟೀಲ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕ ಕಡಾಡಿ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕ ಪ್ರತಾಪರಾವ್ ಪಾಟೀಲ್ ಅವರ ಭೇಟಿಯಲ್ಲಿ ಹಲವಾರು ಪ್ರಮುಖ ರಾಜಕೀಯ ಚರ್ಚೆಗಳು ನಡೆದಿವೆ. ಅಲ್ಲದೆ ಎರಡು ಬೇರೆ ಬೇರೆ ಪಕ್ಷಗಳ ನಾಯಕರ ನಡುವಿನ ಈ ಭೇಟಿಯು ಹೊಸ ರಾಜಕೀಯ ಸಮೀಕರಣಕ್ಕೆ ಕಾರಣವಾಗಬಹುದು ಎನ್ನಲಾಗಿದೆ.