ಅಥಣಿಯಲ್ಲಿ ಎರಡು ದಿನಗಳ ಬೃಹತ್ ಮಹಿಳಾ ದಿನಾಚರಣೆ: ಗೃಹಿಣಿಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ವೇದಿಕೆ!
ಅಥಣಿ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಥಣಿಯಲ್ಲಿ ಇದೇ ಮಾರ್ಚ್ 21 ಮತ್ತು 22 ರಂದು ವಿಭಿನ್ನ ಹಾಗೂ ಬೃಹತ್ ಮಟ್ಟದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೇವಲ ಭಾಷಣ, ಸನ್ಮಾನಗಳಿಗೆ ಮಾತ್ರ ಸೀಮಿತವಾಗದೆ, ಮನೆಯಲ್ಲೇ ಕುಳಿತು ವ್ಯಾಪಾರ ಮಾಡುವ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಫುಡ್ ಫೆಸ್ಟಿವಲ್ ಹಾಗೂ ವಸ್ತು ಪ್ರದರ್ಶನ ಮೇಳವನ್ನು ಏರ್ಪಡಿಸಲಾಗಿದೆ ಎಂದು ಮಹಿಳಾ ಜಾಗೃತಿ ಕೇಂದ್ರ ಅಥಣಿ, ಅಧ್ಯಕ್ಷೆ ಗೀತಾ ತೋರಿ ಮಾಹಿತಿ ನೀಡಿದರು.
ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ಸಾಮಾನ್ಯವಾಗಿ ಮಹಿಳಾ ದಿನಾಚರಣೆ ಅಂದರೆ ಅತಿಥಿಗಳನ್ನು ಕರೆಸಿ, ಹೂವು ಕೊಟ್ಟು ಭಾಷಣ ಮಾಡಿ ಮುಗಿಸುವ ಸಂಪ್ರದಾಯವೇ ಹೆಚ್ಚು. ಆದರೆ ಅಥಣಿಯಲ್ಲಿ ‘ಮಹಿಳಾ ಜಾಗೃತಿ ಕೇಂದ್ರ’ದ ವತಿಯಿಂದ ವಿಭಿನ್ನವಾದ ಪ್ರಯತ್ನಕ್ಕೆ ಕೈಹಾಕಲಾಗಿದೆ. ಸ್ಥಳೀಯ ಭೋಜರಾಜ್ ಕ್ರೀಡಾಂಗಣದಲ್ಲಿ ಮಾರ್ಚ್ 21 ಹಾಗೂ 22 ರಂದು ಎರಡು ದಿನಗಳ ಕಾಲ, ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಮಹಿಳಾ ದಿನಾಚರಣೆ ಮತ್ತು ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಮನೆಯಲ್ಲೇ ಕುಳಿತು ಸಣ್ಣಪುಟ್ಟ ವ್ಯಾಪಾರ ಮಾಡುವ, ಜ್ಯುವೆಲ್ಲರಿ, ಸೀರೆ ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸುವ ಮಹಿಳೆಯರಿಗೆ ಮುಕ್ತ ಮಾರುಕಟ್ಟೆ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತಾಲೂಕಿನ ಸುಮಾರು 68 ಹಳ್ಳಿಗಳ ಮಹಿಳೆಯರಿಗೆ ಈ ಮೂಲಕ ತಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆ ಸಿಗಲಿದೆ ಎಂದರು.
“ಮನೆಯಲ್ಲೇ ವ್ಯಾಪಾರ ಮಾಡುವ ಮಹಿಳೆಯರಿಗೆ ತಮ್ಮ ವಸ್ತುಗಳನ್ನು ಎಲ್ಲಿ ಮಾರಾಟ ಮಾಡಬೇಕು, ಮಾರುಕಟ್ಟೆ ಎಲ್ಲಿದೆ ಎಂಬುದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಹಾಗಾಗಿ ಅವರಿಗಾಗಿಯೇ ಈ ಫುಡ್ ಫೆಸ್ಟಿವಲ್ ಮತ್ತು ಸ್ಟಾಲ್ ಆಯೋಜಿಸಿದ್ದೇವೆ. ಹಲವಾರು ಜನರ ಪರಿಚಯ ಅವರಿಗೆ ಆಗುತ್ತದೆ, ಇದರಿಂದ ಅವರ ವ್ಯಾಪಾರ ವೃದ್ಧಿಯಾಗುತ್ತದೆ.”
ಕೇವಲ ವ್ಯಾಪಾರ-ವಹಿವಾಟು ಮಾತ್ರವಲ್ಲದೆ, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು, ಪೊಲೀಸ್ ಸಿಬ್ಬಂದಿ ಹಾಗೂ ವಿಶೇಷವಾಗಿ ದೇಶ ಕಾಯುವ ಯೋಧರ ಪತ್ನಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪತಿ ದೂರವಿದ್ದರೂ ಮನೆಯನ್ನು, ಮಕ್ಕಳನ್ನು ನಿಭಾಯಿಸುವ ಅವರ ತಾಳ್ಮೆ ಮತ್ತು ಧೈರ್ಯಕ್ಕೆ ವಿಶೇಷ ಗೌರವ ಸಲ್ಲಿಕೆಯಾಗಲಿದೆ.
ಪೊಲೀಸ್ ಇಲಾಖೆಯ ಮಹಿಳೆಯರನ್ನು, ಗಡಿಯಾಚೆ ದೇಶ ಕಾಯುವ ಯೋಧರ ಪತ್ನಿಯರನ್ನು ವಿಶೇಷವಾಗಿ ಗುರುತಿಸಿ ಸನ್ಮಾನಿಸುತ್ತಿದ್ದೇವೆ. ತಾಲೂಕಿನಲ್ಲಿ ಬೇರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿದ್ದರೂ, ನಮ್ಮ ಮಹಿಳಾ ಜಾಗೃತಿ ಕೇಂದ್ರದ ವತಿಯಿಂದ ಅವರನ್ನು ಕಾರ್ಯಕ್ರಮದ ದಿನದಂದು ಕರೆಸಿ ವಿಶೇಷವಾಗಿ ಗೌರವಿಸುತ್ತೇವೆ ಎಂದರು
ಒಟ್ಟಿನಲ್ಲಿ ಅಥಣಿಯ ಮಹಿಳೆಯರಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ಕೇವಲ ಲಾಭದ ದೃಷ್ಟಿಯಿಂದಲ್ಲದೆ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಹೊಸ ದಾರಿ ಮಾಡಿಕೊಡುವ ಸದುದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಲಕ್ಕಿ ಡ್ರಾ ಇಟ್ಟು ಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು



