ಶಿವ ಪ್ರತಿಷ್ಠಾನ ಸೇವಾ ಸಮಿತಿಯಿಂದ ಅದ್ದೂರಿ ಶಿವರಾತ್ರಿ ಆಚರಣೆ: ಶಾಸಕ ಅಶೋಕ ಪಟ್ಟಣ
ಪ್ರತಿ ವರ್ಷದಂತೆ 9ನೇ ವರ್ಷದ ಮಹಾ ಶಿವರಾತ್ರಿ ಆಚರಣೆಯ ಪ್ರಯುಕ್ತ ಮುಳ್ಳೂರ ಗುಡ್ಡ ಶಿವ ದೇವಾಲಯ ಶಿವನಮೂರ್ತಿ ಹಾಗೂ ಬೃಹತ್ ನಂದಿ ಆವರಣದಲ್ಲಿ ಫೆ-15 ರಂದು ಶಿವರಾತ್ರಿ ಹಬ್ಬವನ್ನು ವಿಜೃಂಭನೆಯಿಂದ ಆಚರಣೆ ಮಾಡಲಾಗುತ್ತಿದೆ ಎಂದು ಶಿವ ಪ್ರತಿಷ್ಠಾನ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ವಿಧಾನಸಭೆ ಮುಖ್ಯ ಸಚೇತಕ, ಶಾಸಕ ಅಶೋಕ ಪಟ್ಟಣ ಹೇಳಿದರು.
ಸಮೀಪದ ಮುಳ್ಳೂರ ಗುಡ್ಡದ ಅಶೋಕವನದ ಶಿವನ ಮೂರ್ತಿ ದೇವಸ್ಥಾನದ ಆವರಣದಲ್ಲಿ ಶಿವರಾತ್ರಿ ಆಚರಣೆ ಕುರಿತು ಶಿವ ಭಕ್ತರು, ಪ್ರತಿಷ್ಠಾನದ ಪದಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ನಮ್ಮ ಸ್ನೇಹಿತರ ಸಹಕಾರದಿಂದ ಶಿವರಾತ್ರಿಯಂದು ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಪ್ರಸಾದವಾಗಿ ಶೇಂಗಾ ಕಾಳು, ಬಾಳೆಹಣ್ಣು, ಸಾಬುದಾನಿ, ಖರ್ಜುರ ವಿತರಣೆ ಮಾಡಲಾಗುತ್ತಿದೆ. ಕಾರ್ಯಕರ್ತರು ಹಾಗೂ ಭಕ್ತಾಧಿಗಳು ಪ್ರತಿವರ್ಷ ನಡೆಯುವ ಕಾರ್ಯಕ್ರಮಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಕೊಡುಗೆ ದಾನಿಗಳು ಮತ್ತು ನಮ್ಮ ನೇತೃತ್ವದಲ್ಲಿ ವಿಜೃಂಭನೆಯ ಶಿವರಾತ್ರಿ ಆಚರಣೆ ಮಾಡಲಾಗುತ್ತಿದೆ ಎಂದರು.
ಮನರಂಜನೆ, ಶಿವಜ್ಞಾನ, ಪ್ರಸಿದ್ದ ಪೂಜ್ಯರಿಂದ ಪ್ರವಚನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದೆ. ವೇದಿಕೆ ಸಮಿತಿ, ಪ್ರಸಾದ ವ್ಯವಸ್ಥೆ ಸಮಿತಿ, ದರ್ಶನಕ್ಕೆ ದೇವಸ್ಥಾನದ ಉಸ್ತುವಾರಿ ಸಮಿತಿಗಳನ್ನು ಮಾಡಿ, ಬರುವ ಭಕ್ತಾಧಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸೇವಾ ಸಮಿತಿಯವರು ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಡಿವೈಎಸ್‌ಪಿ ಚಿದಂಬರ ಮಡಿವಾಳರ ಮಾತನಾಡಿ, ಶಿವರಾತ್ರಿ ದಿನದಂದು ಅಗತ್ಯ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆ ಸೇರಿ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಲು ಪೊಲೀಸ್ ಇಲಾಖೆ ಸಕಲ ಸಹಾಯ ಸಹಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಶಿವನ ಮೂರ್ತಿ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳಾದ ಪರಪ್ಪ ಜಂಗವಾಡ, ಜಿ.ಬಿ.ರಂಗನಗೌಡ್ರ, ವಿಜಯ ಶೆಟ್ಟಿ, ರಾಜಶೇಖರ ತೋಳಗಟ್ಟಿ, ನಂದಕುಮಾರ ಸುರೇಬಾನ, ಶೇಖರ ಸಿದ್ದಿಂಗಪ್ಪನವರ, ಫಕೀರಪ್ಪ ಕೊಂಗವಾಡ, ಜಹೂರ ಹಾಜಿ, ಪೀರು ತಳವಾರ, ಶಿವರಡ್ಡಿ ಹೂಲಿಕಟ್ಟಿ, ಪಿಎಸ್‌ಐ ಸವಿತಾ ಮುನ್ಯಾಳ ಸೇರಿ ಉಪಸ್ಥಿತರಿದ್ದರು



