ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ – ಸ್ಥಿತಿಗತಿ ಕುರಿತ ಸ್ಪಷ್ಟೀಕರಣ
2000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಸ್ಪಷ್ಟಪಡಿಸುವುದೇನೆಂದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ (SC-NBWL) ರಚಿಸಿದ್ದ ಉಪ ಸಮಿತಿಯು ಸಿದ್ಧಪಡಿಸಿದ ವರದಿಯು ಕೇವಲ ಕಾನೂನುಬದ್ಧ ಪರಿಶೀಲನಾ ಪ್ರಕ್ರಿಯೆಯ ಒಂದು ಹಂತವಾಗಿದ್ದು, ಅದನ್ನು 89ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಪರಿಗಣನೆಗಾಗಿ ಮಂಡಿಸಲಾಗಿತ್ತು.
ವಿಸ್ತೃತ ಚರ್ಚೆಯ ನಂತರ, SC-NBWL, ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (NIAS) ನೀಡುವ ಅಭಿಪ್ರಾಯಗಳನ್ನು ಹಾಗೂ ಪ್ರಸ್ತಾವನೆ ಕುರಿತು ಎತ್ತಲಾಗಿರುವ ವಿಷಯಗಳಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
SC-NBWL ನೀಡಿದ ನಿರ್ದೇಶನದ ಅನುಸಾರ, ಕರ್ನಾಟಕ ಸರ್ಕಾರವು ಯೋಜನೆಯ ಸ್ವತಂತ್ರ ಮೌಲ್ಯಮಾಪನ ನಡೆಸುವ ಜವಾಬ್ದಾರಿಯನ್ನು NIASಗೆ ವಹಿಸಿತು. NIAS ಸ್ಥಳ ಪರಿಶೀಲನೆ ನಡೆಸಿ, ತಾಂತ್ರಿಕ ವಿವರಗಳು ಹಾಗೂ ಲಭ್ಯವಿರುವ ಪರಿಸರ ಸಂಬಂಧಿತ ಮಾಹಿತಿಗಳ ಆಧಾರದ ಮೇಲೆ ತನ್ನ ಮೌಲ್ಯಮಾಪನವನ್ನು ಕೈಗೊಂಡಿತು. NIAS ವರದಿಯನ್ನು 24.06.2026 ರಂದು ಸಲ್ಲಿಸಲಾಯಿತು.
ನಂತರ, SC-NBWL ಪ್ರಸ್ತಾಪಿಸಿದ್ದ ಅಂಶಗಳಿಗೆ ಉತ್ತರ ನೀಡುವ ಅನುಪಾಲನಾ ವರದಿ, NIAS ವರದಿ ಹಾಗೂ ಅಗತ್ಯ ಸ್ಪಷ್ಟೀಕರಣಗಳನ್ನು ಒಳಗೊಂಡ ದಾಖಲೆಗಳನ್ನು 30.06.2026 ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEF&CC) ಸಲ್ಲಿಸಲಾಗಿದ್ದು, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಮುಂದಿನ ಪರಿಗಣನೆಗಾಗಿ ಕಳುಹಿಸಲಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆಯು ಪ್ರಸ್ತುತ MoEF&CCಯಲ್ಲಿ ಮುಂದಿನ ನಿರ್ಧಾರಕ್ಕಾಗಿ ಪರಿಶೀಲನೆಯಲ್ಲಿದೆ. ಸಕ್ಷಮ ಪ್ರಾಧಿಕಾರದ ಪರಿಗಣನೆ ಹಾಗೂ ಮುಂದಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು 01.10.2026ಕ್ಕೆ ಮುಂದೂಡಿದೆ.
ಯೋಜನೆಯ ಪ್ರಸ್ತಾವನೆಯ ಪ್ರಕ್ರಿಯೆಯಲ್ಲಿ ಎಲ್ಲಾ ಕಾನೂನುಬದ್ಧ ಕ್ರಮಗಳು ಹಾಗೂ ಪರಿಸರ ಸಂಬಂಧಿತ ಅಗತ್ಯ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ ಎಂದು ಕೆಪಿಸಿಎಲ್ ಪುನರುಚ್ಚರಿಸುತ್ತದೆ.



