ಶರಣ ಸಾಹಿತ್ಯವು ಸಾರ್ವಕಾಲಿಕ ಸತ್ಯ ಮತ್ತು ಜೀವಂತ ಸಾಹಿತ್ಯ:ಬಸವರಾಜ ಬೊಮ್ಮಾಯಿ
ಮಾನವೀಯ ಧರ್ಮವೊಂದೇ ಶಾಸ್ವತ ಧರ್ಮ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಬಸವಾದಿ ಶರಣರ ವೈಚಾರಿಕ ಕ್ರಾಂತಿಯ ಫಲಶ್ರುತಿಯೇ ವಚನ ಸಾಹಿತ್ಯವಾಗಿದ್ದು, ಇದು ಸಾರ್ವಕಾಲಿಕ ಸತ್ಯ ಹಾಗೂ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಜೀವಂತ ಸಾಹಿತ್ಯವಾಗಿದೆ. ಇದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 14 ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಮನುಷ್ಯರು ತಮ್ಮ ತಂದೆ-ತಾಯಿಯನ್ನಾಗಲಿ ಅಥವಾ ತಾವು ಹುಟ್ಟುವ ಸಮಾಜವನ್ನಾಗಲಿ ಅರ್ಜಿ ಹಾಕಿ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ಪ್ರಕ್ರಿಯೆ ಇರುತ್ತಿದ್ದರೆ, ಜಗತ್ತಿನ ಬಹುತೇಕ ಜನ ಶರಣ ಸಮಾಜದಲ್ಲೇ ಹುಟ್ಟಲು ಬಯಸುತ್ತಿದ್ದರು ಶರಣ ಸಮಾಜದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಹಾಗೂ ಅದೃಷ್ಟ ಎಂದರು.
ಜೀವಂತ ಸಾಹಿತ್ಯ:
ಜಗತ್ತಿನ ಎಷ್ಟೋ ಸಾಹಿತ್ಯಗಳು ಭೂತಕಾಲಕ್ಕೆ ಸೇರಿಹೋಗಿವೆ ಅಥವಾ ಕಾಲಾನಂತರದಲ್ಲಿ ಅಪ್ರಸ್ತುತವಾಗಿವೆ. ಆದರೆ ಶರಣ ಸಾಹಿತ್ಯವನ್ನು ಅಲ್ಪವಾಗಿಸುವ ನಿರಂತರ ಪ್ರಯತ್ನಗಳು ನಡೆದಾಗಲೂ, ಅದು ಮತ್ತೆ ಮತ್ತೆ ಪುಟಿದೆದ್ದಿದೆ. ಇದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶರಣ ಸಾಹಿತ್ಯದಲ್ಲಿ ಯಾವುದೇ ಕಾಲ್ಪನಿಕ ಕಥೆಗಳಿಲ್ಲ. ಶರಣ ಸಾಹಿತ್ಯದಲ್ಲಿ ಬದುಕಿನ ಸತ್ಯ ಇದೆ. ಆಧುನಿಕ ಕಲಿಯುಗದಲ್ಲಿ ಸತ್ಯ ಪರೀಕ್ಷೆಗೆ ಒಳಪಡುತ್ತದೆ. ಅದೇ ರೀತಿ ಶರಣ ಸಾಹಿತ್ಯ ಪರೀಕ್ಷೆಗೆ ಒಳಪಟ್ಟು ಪರಿಶುದ್ದವಾದ ಶಿಲೆಯಾಗಿ ನಿಂತಿದೆ. ಇದರಲ್ಲಿರುವ ಉದಾಹರಣೆಗಳು ಬದುಕಿನ ಸತ್ಯಗಳಾಗಿವೆ. ಉದಾಹರಣೆಗೆ: ಕಾಗೆ ಒಂದಿಷ್ಟು ಆಹಾರ ಕಂಡರೆ ತನ್ನ ಇಡೀ ಕುಲವನ್ನೇ ಕೂಗಿ ಕರೆಯುತ್ತದೆ. ಬದುಕಿನಲ್ಲಿ ಆದ್ಯತೆ ಬದಲಾಗುತ್ತದೆ. ಮೂವತ್ತು ವರ್ಷದ ಹಿಂದಿನ ಆದ್ಯತೆ ಈಗಿಲ್ಲ. ಈ ಗೊಂದಲಗಳ ನಡುವೆ ನಾವು ನಮ್ಮ ವೈಚಾರಿಕತೆ ಉಳಿಸಿಕೊಂಡು ಹೋಗಬೇಕು ಧರ್ಮದ ಬಗ್ಗೆ ಬೇರೆ ಬೇರೆ ವಿಚಾರ ಇವೆ. ಒಂದು ಕಾಲದಲ್ಲಿ ಚರ್ಚ್ ಗಳು ಆಳ್ವಿಕೆ ಮಾಡುತ್ತಿದ್ದವು. ಸಾಕ್ರೆಟಿಸ್ ಚರ್ಚ್ ಗಳನ್ನು ನಿಮಗೆ ಜೀವ ಕೊಡುವ ಶಕ್ತಿ ಇಲ್ಲದಿರುವಾಗ, ಮರಣ ದಂಡನೆ ಕೊಡುವ ಅಧಿಕಾರ ಇಲ್ಲ ಎಂದು ಹೇಳಿದ ಅದರೆ ಅವನ ವಾದ ಸೋತಿತು. ಅವನು ವಿಷ ಕುಡಿದು ಸಾವನಪ್ಪಿದ. ಆದರೆ, ಆತನ ವಿಚಾರ ಈಗಲೂ ಜೀವಂತವಾಗಿದೆ. ಬಸವಣ್ಣ ಹಾಗೂ ಶರಣ ವಿಚಾರದಲ್ಲಿಯೂ ಅದೇ ಆಗಿದೆ ಎಂದು ಹೇಳಿದರು.
ರಾಜಕಾರಣಿಗಳ ಹೇಳಿಕೆಗೆ ತಲೆ ಕೆಡಿಸಿಕೊಳ್ಳಬೇಡಿ
ಇವತ್ತಿನ ಕಲಿಯುಗದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಭಯೋತ್ಪಾದನೆ ನಡೆಯುತ್ತಿರುವುದು ವಿಷಾದನೀಯ. ಆದರೆ “ದಯೆಯಿಲ್ಲದ ಧರ್ಮವದು ಧರ್ಮವಲ್ಲ” ಎಂಬ ಬಸವಣ್ಣನವರ ವಾಣಿಯಂತೆ ಮಾನವೀಯ ಧರ್ಮವೊಂದೇ ಶಾಶ್ವತ ಧರ್ಮವಾಗಿದೆ. ರಾಜಕಾರಣಿಗಳ ಹೇಳಿಕೆಗೆ ತಲೆಕೆಡಿಸಿಕೊಳ್ಳಬೇಡಿ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಅಥವಾ ಕೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರು ತಮಗೆ ಸರಿ ಎನಿಸಿದ್ದನ್ನು ಬೇಡಿಕೆ ಇಡುತ್ತಾರೆ. ಆದ್ದರಿಂದ ಸಾರ್ವಜನಿಕರು ರಾಜಕಾರಣಿಗಳ ಹೇಳಿಕೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಶರಣರ ವೈಚಾರಿಕತೆಯು ಸಮಾಜವನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಜಗತ್ತಿನ ಮೊದಲ ಸಂಸತ್ತು ‘ಅನುಭವ ಮಂಟಪ’
ಬಸವಣ್ಣ ಮೂಢ ನಂಬಿಕೆಯ ಬಗ್ಗೆ ಹೇಳಿಕೆ ನೀಡಿದ್ದಾನೆ. ನಾನು ವಿಧಾನಸೌಧದ ಮುಂದೆ ಬಸವಣ್ಣನ ಮೂರ್ತಿ ಸ್ಥಾಪಿಸಿದ್ದೇನೆ. ಬೆಳಗಾವಿ ಸುವರ್ಣ ಸೌಧದ ಮುಂದೆ ಕಿತ್ತೂರು ಚನ್ನಮ್ಮನ ಮೂರ್ತಿ ನಿಲ್ಲಿಸಿದ್ದೇನೆ. ನಮ್ಮಲ್ಲಿ ದ್ವಂದ್ವಗಳಿವೆ. ಬಸವಣ್ಣ ಲೋಕದ ಡೊಂಕ ನಿವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆ ಮನೆಯವರ ದುಖಕ್ಕೆ ಅಳುವವರ ಮೆಚ್ಚನಾ ಕೂಡಲಸಂಗಮದೇವ ಅಂತ ಹೇಳಿದ್ದಾರೆ. ಬಸವಣ್ಣನವರು ಕೇವಲ ವಚನ ಸಾಹಿತ್ಯಕ್ಕೆ ಸೀಮಿತವಾಗದೆ, ಒಬ್ಬ ದಕ್ಷ ಮಂತ್ರಿಯಾಗಿ, ಆಡಳಿತಗಾರರಾಗಿ ಸೇವೆ ಸಲ್ಲಿಸಿದವರು. ಅವರು ಸ್ಥಾಪಿಸಿದ ‘ಅನುಭವ ಮಂಟಪ’ವೇ ಜಗತ್ತಿನ ಮೊದಲ ಸಂಸತ್ತಾಗಿದೆ. ಇದನ್ನು ನಮ್ಮ ಪ್ರಧಾನ ಮಂತ್ರಿಗಳು ವಿಶ್ವದ ಯಾವುದೇ ದೇಶಕ್ಕೆ ಹೋದರೂ ಹೇಳುತ್ತಾರೆ ಎಂದು ಹೇಳಿದರು.
ಬಿಎಸ್ ವೈ ಕೊಡುಗೆ ಶ್ಲಾಘನೆ:
ಬಸವಕಲ್ಯಾಣದಲ್ಲಿ ಅನುಭವ ಮಂಟಪದ ನಿರ್ಮಾಣಕ್ಕೆ ದೃಢ ತೀರ್ಮಾನ ಕೈಗೊಂಡು, ಹಣಕಾಸಿನ ನೆರವು ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿ ಅವರ ಸ್ಮಾರಕಕ್ಕೆ 50 ಲಕ್ಷ ರೂ. ನೀಡಿದ್ದು ಹಾಗೂ ಶರಣ ಸಾಹಿತ್ಯದ ಸಂಪುಟಗಳನ್ನು ಸರ್ಕಾರದ ವತಿಯಿಂದ ಅಧಿಕೃತವಾಗಿ ಪ್ರಕಟಿಸುವಲ್ಲಿ ಯಡಿಯೂರಪ್ಪ ಅವರು ನೀಡಿದ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ತಾವು ಮುಖ್ಯಮಂತ್ರಿ ಯಾಗಿದ್ದಾಗ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಿರುವುದಾಗಿ ತಿಳಿಸಿದರು.
ಸಿ.ಸೋಮಶೇಖರ್ ಅವರ ಸೇವೆಗೆ ಪ್ರಶಂಸೆ
ಐಎಎಸ್ ಅಧಿಕಾರಿಯಾಗಿದ್ದರೂ ಶರಣ ತತ್ವವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು, ತಮ್ಮ ಸೇವಾವಧಿಯಲ್ಲೂ ಯಾವುದೇ ಅಂಜಿಕೆಯಿಲ್ಲದೇ ಶರಣ ಸಾಹಿತ್ಯದ ಉಳಿವಿಗಾಗಿ ಶ್ರಮಿಸಿದ ಡಾ. ಸಿ. ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಬೊಮ್ಮಾಯಿ ಕೊಂಡಾಡಿದರು. ಬೆಂಗಳೂರಿನಲ್ಲಿ ಈ ಸಮ್ಮೇಳನ ಇಷ್ಟು ಯಶಸ್ವಿಯಾಗಲು ಅವರ ಶ್ರಮವೇ ಕಾರಣ ಎಂದರು. ಸಮ್ಮೇಳನದಲ್ಲಿ ಗಣ್ಯರ ಚಿಂತನೆಗಳಿಂದ ಮೂಡಿಬಂದ ಎಲ್ಲಾ ಪ್ರಮುಖ ವಿಚಾರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚುವ ನಿರ್ಧಾರ ಕೈಗೊಳ್ಳಬೇಕು. ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು., ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಇಸ್ರೊ ಮಾಜಿ ಅಧ್ಯಕ್ಷ ಕಿರಣ ಕುಮಾರ್, ನಿರ್ಮಾಪಕ ಬಸಂತಕುಮಾರ ಪಾಟೀಲ್, ನಿವೃತ್ತ ಡಿಜಿಪಿ ರೇವಣಸಿದ್ದಯ್ಯ, ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಸೇರಿದಂತೆ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. ನಾಡೋಜ ಎಸ್. ಷಡಕ್ಷರಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.



