ದೃಶ್ಯದಲ್ಲೇ ನೊಂದವರ ನೋವಿಗೆ ಮಿಡಿದ ಹೆಮ್ಮೆಯ ಪತ್ರಕರ್ತ: ಪ್ರವೀಣ್ ಶಿಂಧೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ..
ಮಾಧ್ಯಮ ಕ್ಷೇತ್ರದ ಮೌಲ್ಯ ಎತ್ತಿ ಹಿಡಿದ ಯುವ ಪತ್ರಕರ್ತ…
ಬೆಳಗಾವಿ: ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಬೆಳಗಾವಿಯ ಟಿವಿ9 ಜಿಲ್ಲಾ ಕ್ಯಾಮೆರಾಮನ್ ಪ್ರವೀಣ್ ಶಿಂಧೆ ಅವರಿಗೆ 2025ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಪ್ರವೀಣ್ ಶಿಂಧೆ ಅವರು ಸುದೀರ್ಘ 16 ವರ್ಷಗಳ ಕಾಲ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಹೆಮ್ಮೆಯ ವಿಡಿಯೋ ಜರ್ನಲಿಸ್ಟ್ ಆಗಿದ್ದಾರೆ.
ಆರಂಭದಲ್ಲಿ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಟಿ ನ್ಯೂಸ್ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಪ್ರವೇಶಿಸಿದ ಅವರು ಐದು ವರ್ಷಗಳ ಕಾಲ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದರು.
ಬಳಿಕ ಬಿಟಿವಿಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಪ್ರಸ್ತುತ ಕಳೆದ 7 ವರ್ಷಗಳಿಂದ ರಾಜ್ಯದ ಯಶಸ್ವಿ ಸುದ್ದಿವಾಹಿನಿಯಾದ ಟಿವಿ9ನಲ್ಲಿ ಬೆಳಗಾವಿ ಜಿಲ್ಲೆಯ ಕ್ಯಾಮೆರಾಮನ್ ಆಗಿ ಸೇವೆಯಲ್ಲಿದ್ದಾರೆ.
ಒಬ್ಬ ಪತ್ರಕರ್ತನಾಗಿ ಕಷ್ಟ ಎಂದವರ ಪಾಲಿನ ಆಪತ್ಭಾಂದವನಾಗಿ ಬೆಂಬಲವಾಗಿ ನಿಲ್ಲುವ ಮಾತೃ ಹೃದಯೀ ಪ್ರವೀಣ್ ಶಿಂಧೆ ಅವರು ತಮ್ಮ ವರದಿಗಾರರಾದ ಸಹದೇವ್ ಮಾನೆ ಅವರ ಪ್ರೋತ್ಸಾಹದಿಂದ ಇಂದಿಗೂ ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳಿಗೆ, ನೊಂದವರು, ಬಡವರ ಪರ ಅವರ ಧ್ವನಿಯಾಗಿ ಅವರ ಸಮಸ್ಯೆಯನ್ನ ರಾಜ್ಯದ ಜನರ ಮುಂದಿಟ್ಟು ಮಾಧ್ಯಮಗಳ ನಿಜವಾದ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತ ಬಂದಿದ್ದಾರೆ. ಇವರ ಸಾಮಾಜಿಕ ಕಳಕಳಿಯ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸಿದೆ.
ಯುವ ಪತ್ರಕರ್ತರಿಗೆ ಮಾದರಿ ವ್ಯಕ್ತಿತ್ವ : ಸತ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶಿಂಧೆ ಅವರು ತೋರಿದ ಬದ್ದತೆಯನ್ನು ಜಿಲ್ಲಾಡಳಿತವು ಗುರುತಿಸಿದೆ. ಮಾಧ್ಯಮ ರಂಗದಲ್ಲಿ ನಿರಂತರವಾಗಿ ಸಕ್ರಿಯರಾಗಿರುವ ಇವರು ತಮ್ಮ ಕ್ಯಾಮೆರಾವನ್ನು ಶೋಷಿತರು ಹಾಗೂ ಸಮಾಜದ ಅಂಚಿನಲ್ಲಿರುವ ನೊಂದ ಜನರ ದನಿಯನ್ನಾಗಿ ಪರಿಣಾಮಕಾರಿಯಾಗಿ ಬಳಸುತ್ತ ಬಂದಿದ್ದಾರೆ. ಹೀಗೆ ಸಾಮಾಜಿಕ ಬದಲಾವಣೆಯ ಗುರಿಯೊಂದಿಗೆ ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಪತ್ರಿಕೋದ್ಯಮ, ಮಾಧ್ಯಮ ಕ್ಷೇತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಇವರು ಪಾತ್ರ ವಹಿಸುತ್ತಿದ್ದಾರೆ. ಇವರ ಪ್ರಾಮಾಣಿಕತೆ, ವೃತ್ತಿಪರತೆ ಯುವ ಪತ್ರಕರ್ತರಿಗೆ ಮಾದರಿಯಾಗಿದೆ.
ನಾಳೆ ನಡೆಯಲಿರುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಗಣ್ಯರು ಪ್ರವೀಣ್ ಶಿಂಧೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತಮ್ಮ ಅವಿರತ ಕನ್ನಡ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪ್ರವೀಣ್ ಶಿಂಧೆ ಅವರಿಗೆ ಜಿಲ್ಲಾಡಳಿತದ ಅಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘ, ಜನಪ್ರತಿನಿಧಿಗಳು ಹಾಗೂ ಆರ್ ಎಂಡಿ ಡಿಜಿಟಲ್ ಮೀಡಿಯಾ ಬಳಗವೂ ಅಭಿನಂದಿಸಿದೆ.



