ಉತ್ತರ ಕರ್ನಾಟಕ ಪ್ರವಾಹ, ರೈತರಿಗೆ ತಕ್ಷಣ ಮಧ್ಯಂತರ ಪರಿಹಾರ ನೀಡಿ: ಉತ್ತರ ಕರ್ನಾಟಕ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ ಆಗ್ರಹರೈತರ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 25 ಸಾವಿರ ರೂ. ಮಧ್ಯಂತರ ಪರಿಹಾರ ನೀಡಿ: ಶಿವಕುಮಾರ್ ಆರ್ ಮೇಟಿ
ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಪ್ರವಾಹ ಉಂಟಾಗಿ ಸಾಕಷ್ಟು ಬೆಳೆ ಹಾನಿಯಾಗಿದ್ದು ರಾಜ್ಯ ಸರ್ಕಾರ ತಕ್ಷಣವೇ ಮಧ್ಯಂತರ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಅಧ್ಯಕ್ಷ ಶಿವಕುಮಾರ ಆರ್ ಮೇಟಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದೆದಿಗಿಂತಲೂ ಜಾಸ್ತಿ ಮಳೆಯಾಗಿದೆ. ಹೀಗಾಗಿ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಮುಂಗಾರು ಹಂಗಾಮಿನ ತೊಗರಿ, ಹೆಸರು, ಹತ್ತಿ ಸೋಯಾ ರೈತರ ಸಂಪೂರ್ಣ ಬೆಳೆ ಹಾನಿಯಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಸುಗ್ಗಿಯ ಸಂಭ್ರಮದಲ್ಲಿರಬೇಕಾದ ರೈತರು ಬೆಳೆ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸರ್ಕಾರ ಈ ಸಂದರ್ಭದಲ್ಲಿ ಸಮೀಕ್ಷೆ ನಡೆಸುವ ಹೆಸರಿನಲ್ಲಿ ಕಾಲ ಹರಣ ಮಾಡುವ ಬದಲು ತಕ್ಷಣವೇ ಪ್ರತಿ ಎಕರೆಗೆ 25 ಸಾವಿರ ರೂ. ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ, ರೈತರು ನೆಮ್ಮದಿಯಿಂದ ದಸರಾ ದೀಪಾವಳಿ ಹಬ್ಬ ಆಚರಿಸಲು ಅವಕಾಶ ಕಲ್ಪಿಸಬೇಕು.
ಅಲ್ಲದೇ ಅನೇಕ ಜನರು ಮನೆ ಜಾನುವಾರುಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು, ಅವರಿಗೆ ತಕ್ಷಣವೇ ನೆಮ್ಮದಿ ಕೇಂದ್ರಗಳನ್ನು ತೆರೆಯಬೇಕು. ಪ್ರತಿ ಕುಟುಂಬದ ನಿರ್ವಹಣೆಗೆ ತುರ್ತು ಪರಿಹಾರವಾಗಿ ಹತ್ತು ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.