ರಾಮದುರ್ಗ:ರಡ್ಡಿ ಸಮುದಾಯ ಅಂದ ತಕ್ಷಣ ಎಲ್ಲರೂ ಶ್ರೀಮಂತರಿರುವುದಿಲ್ಲ. ನಮ್ಮ ಸಮುದಾಯದಲ್ಲಿ ಸಾಕಷ್ಟು ಬಡವರಿದ್ದಾರೆ. ಅವರ ಅಭಿವೃದ್ಧಿಗೆ ಸರಕಾರ ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಸಮಾಜದ ಜನತೆಯ ಪ್ರಗತಿಗೆ ಸಹಕಾರ ನೀಡಬೇಕು ಎಂದು ರಡ್ಡಿ ಜನಸಂಘದ ರಾಜ್ಯಾಧ್ಯಕ್ಷ ಪ್ರಭಾಕರ ರೆಡ್ಡಿ ಹೇಳಿದರು.ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಾಂತರಾಜ ಆಯೋಗ ರೆಡ್ಡಿ ಸಮುದಾಯದ ಆರ್ಥಿಕ ಹಾಗೂ ಅಂಕಿ ಸಂಖ್ಯೆಗಳ ಕುರಿತು ನಿಖರ ಮಾಹಿತಿ ಸರಕಾರಕ್ಕೆ ಸಲ್ಲಿಸಿಲ್ಲ. 35-40 ಲಕ್ಷ ಜನಸಂಖ್ಯೆ ಹೊಂದಿದ ರಡ್ಡಿ ಸಮುದಾಯವನ್ನು ಕೇವಲ 7 ಲಕ್ಷ ಜನಸಂಖ್ಯೆಗೆ ಸೀಮಿತಗೊಳಿಸಲಾಗಿದೆ. ಕಾಂತರಾಜ ಆಯೋಗದ ವರದಿಯಿಂದ ಸಮುದಾಯ ಅಸಮಾಧಾನಗೊಂಡಿದೆ. ಸರಕಾರ ರಾಜ್ಯದ ಉದ್ದಗಲಕ್ಕೂ ಮೂಲೆ, ಮೂಲೆಯಲ್ಲಿರುವ ಸಮುದಾಯದ ಜನತೆಯನ್ನು ಗುರುತಿಸಿ, ನೈಜ ಸಮೀಕ್ಷೆ ನಡೆಸಲು ಸರಕಾರ ಮುಂದಾಗಬೇಕು.
ಪ್ರಸ್ತುತ ಸರಕಾರ ನಡೆಸುತ್ತಿರುವ ಜಾತಿ ಜನಗಣತಿ ಸಮೀಕ್ಷೆಯ ಜಾತಿ 1105 ಕಾಲಂನಲ್ಲಿ ಸಮಾಜ ರಡ್ಡಿ ಎಂದು ಧರ್ಮ ಎಂದಲ್ಲಿ ಹಿಂದು ಎಂದು ಸಮುದಾಯದ,ಜನತೆ ಬರೆಯಿಸಬೇಕು. ಯಾವುದೇ ಕಾರಣಕ್ಕೂ ಉಪ ಪಂಗಡಗಳ ಹೆಸರು ಬರೆಯಿಸಬಾರದು ಎಂದು ಮನವಿ ಮಾಡಿದ ಅವರು, ರಡ್ಡಿ ಜನಸಂಘ ಸ್ಥಾಪನೆಯಾಗಿ ಸೆಪ್ಟೆಂಬರ-24 ಕ್ಕೆ ಸುಮಾರು 100 ವರ್ಷ ಪೂರೈಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸರ್ವ ಜನನಾಯಕರನ್ನು ಕರೆದು ಬೆಂಗಳೂರಿನ ಅರಮನೆ ಆವರಣದಲ್ಲಿ ಸೆಪ್ಟೆಂಬರ-24 ರಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ರಡ್ಡಿ ಸಮುದಾಯದ ರಾಜ್ಯ ಹಾಗೂ ತಾಲೂಕಿನ ಸಮಸ್ತ ಸಮಾಜ ಬಾಂಧವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕಾರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಪ್ರಭಾಕರ ರಡ್ಡಿ ಮನವಿ ಮಾಡಿದರು.
ಸಮಾಜದ ಈ ಸಂದರ್ಭದಲ್ಲಿ ರಡ್ಡಿ ಜನಸಂಘದ ಶಾಂತರಾಜು, ರಡ್ಡಿ ತಾಲೂಕಾಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ, ಕಲ್ಲಣ್ಣ ವಜ್ರಮಟ್ಟಿ, ರಾಜಶೇಖರ ತೋಳಗಟ್ಟಿ ಸೇರಿದಂತೆ ಸಮಾಜದ ಮುಖಂಡರು ಮತ್ತಿತರರಿದ್ದರು.