ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಟಕೋಳ ಹಾಗೂ ಹೊಸಕೋಟಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದಿದ್ದೇನೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಹೇಳಿದರು.ತಾಲೂಕಿನ ಕಟಕೊಳ ಹಾಗೂ ಹೊಸಕೋಟಿ ಗ್ರಾಮಗಳಲ್ಲಿ 1 ಕೋಟಿ ವೆಚ್ಚದಲ್ಲಿ ಪತ್ಯೇಕ ಎರಡು ಪಶು ಆಸ್ಪತ್ರೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಪಶುಗಳನ್ನು ಜನತೆ ತಮ್ಮ ಜೀವದಂತೆ ಕಾಳಜಿ ವಹಿಸಬೇಕು. ಅವುಗಳ ಆರೈಕೆ ಮಾಡಲು ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳ ಸದ್ಬಳಕೆ ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಗ್ರಾಮಸ್ಥರ ಸರ್ವ ಬೇಡಿಕೆಗಳನ್ನು ಇಡೇರಿಸಲು ಸರಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿ, ಅಭಿವೃದ್ಧಿಗೆ ಒತ್ತು ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಪಶು ಆಸ್ಪತ್ರೆ ತಾಲೂಕು ವೈದ್ಯಾಧಿಕಾರಿ ಗಿರೀಶ ಪಾಟೀಲ ಮಾತನಾಡಿ, ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹಾಗೂ ಪಶು ವೈದ್ಯರ ಕೊರತೆ ಇದ್ದು, ಇದ್ದ ಸಿಬ್ಬಂದಿಗಳೇ ರೈತರಿಗೆ ಅನುಕೂಲವಾಗುವಲ್ಲಿ ಸಹಕಾರ ನೀಡುತ್ತಿದ್ದೇವೆ. ಶಾಸಕರು ಸರಕಾರದ ಮಟ್ಟದಲ್ಲಿ ರಾಮದುರ್ಗ ತಾಲೂಕಿನಲ್ಲಿರುವ ಪಶು ಆಸ್ಪತ್ರೆಗಳ ಆಸ್ಪತ್ರೆಗಳ ಅಗತ್ಯ ಸಿಬ್ಬಂದಿ ಹಾಗೂ ವೈದ್ಯರ ನೇಮಕಕ್ಕೆ ಕಾಳಜಿ,ವಹಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಟಕೋಳ ಗ್ರಾಮದ ಮುಖಂಡರಾದ ಎನ್.ಬಿ. ದಂಡಿನದುರ್ಗಿ, ನಿಂಗರಾಜ ದೇಸಾಯಿ, ಹೊಸಕೋಟಿ ಗ್ರಾಮದ ಮುಖಂಡರಾದ ಶಿವನಗೌಡ ಪಾಟೀಲ, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ ಚುನಾಯಿತ ಸದಸ್ಯರು, ಸ್ಥಳೀಯ ಮುಖಂಡರು ಮತ್ತಿತರರಿದ್ದರು.