“ಮಾಗಡಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಸತ್ತೇಗಾಲದಿಂದ ಕ್ಷೇತ್ರದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ, 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ, ಮಂಚನಬೆಲೆ ಅಣೆಕಟ್ಟು ಕೆಳಭಾಗದ ಅಭಿವೃದ್ದಿಗೆ ರೂ.13 ಕೋಟಿ, ರೂ.35 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಇಲಾಖೆಯಿಂದ ಕ್ಷೇತ್ರದ ಅಭಿವೃದ್ದಿಗೆ ರೂ.100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಮಾಗಡಿ ಯೋಜನಾ ಪ್ರಾಧಿಕಾರದಿಂದ ಗೌರಮ್ಮ ಕೆರೆ ಅಭಿವೃದ್ಧಿಗೆ ರೂ.20 ಕೋಟಿ ನೀಡಲಾಗಿದೆ. ಇ ಸ್ವತ್ತನ್ನು 1200 ಜನರಿಗೆ ವಿತರಣೆ ಮಾಡಲಾಗಿದ್ದು ಮಿಕ್ಕವರಿಗೂ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಇಂತಹ ನೂರಾರು ಕೆಲಸಗಳನ್ನು ನಿಮಗಾಗಿ ನೀಡಿದ್ದೇವೆ. ಸುಮ್ಮನಹಳ್ಳಿಯಿಂದ ತಾವರೆಕೆರೆವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ. ಇದರಿಂದ ನಿಮ್ಮ ಕ್ಷೇತ್ರಕ್ಕೆ ಹೆಚ್ಚು ಲಾಭವಾಗಲಿದೆ” ಎಂದು ತಿಳಿಸಿದರು.
“ಆರೋಗ್ಯ ಕ್ಷೇತ್ರದಿಂದ ರೂ.40 ಕೋಟಿ ವೆಚ್ಚದ ಕಾಮಗಾರಿಗೆ ಆರೋಗ್ಯ ಸಚಿವರು ಮತ್ತು ನೂತನ ಬಸ್ ನಿಲ್ದಾಣ ಹಾಗೂ ಡಿಪೋ ಬಗ್ಗೆ ಸಾರಿಗೆ ಸಚಿವರು ವಾಗ್ದಾನ ನೀಡಿದ್ದಾರೆ. ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುವುದಕ್ಕೆ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಕೆಲಸಗಳೇ ಸಾಕ್ಷಿ” ಎಂದರು.
ಕನಕಪುರದಂತೆ ಮಾಗಡಿಯೂ ನಮ್ಮ ಕ್ಷೇತ್ರ, ನಿಜವಾದ ಬಂಡೆ ಬಾಲಕೃಷ್ಣ
“ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಆದರೆ ಕೆಂಪು ಬಂಡೆ ನಿಮ್ಮ ಬಾಲಕೃಷ್ಣ. ಇವರು ಗಟ್ಟಿಯಾಗಿ ಬಂಡೆಯಂತೆ ಕುಳಿತುಕೊಂಡು ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಎಲ್ಲೇ ಹೋದರು ಕ್ಷೇತ್ರದ ಬಗ್ಗೆ ಅರ್ಜಿ ಹಿಡಿದುಕೊಂಡು ಬರುತ್ತಾರೆ. ಕ್ಷೇತ್ರದ ಜನರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮಾಗಡಿ ಕ್ಷೇತ್ರ ಬಾಲಕೃಷ್ಣ ಅವರದ್ದಲ್ಲ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರ ಸ್ವಂತ ಕ್ಷೇತ್ರವಿದ್ದಂತೆ. ಕನಕಪುರದಲ್ಲಿ ಯಾವ ರೀತಿ ಕೆಲಸ ಮಾಡುತ್ತಾ ಇದ್ದೇವೋ ಅದೇ ರೀತಿ ಇಲ್ಲಿಯೂ ಕೆಲಸ ಮಾಡುತ್ತೇವೆ”ಎಂದರು.
“ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದಿದ್ದರೆ ಬದುಕಿಗೆ ಅವಮಾನ. ದೇವರು ನಮಗೆ ಕೊಟ್ಟ ಅವಕಾಶ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಸಕ ಬಾಲಕೃಷ್ಣ ಅವರು ಜನರ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಈ ಐದು ಬೆರಳು ಸೇರಿ ಕೈ ಗಟ್ಟಿಯಾಯಿತು ಅದೇ ರೀತಿ ನಿಮ್ಮಿಂದ ಬಾಲಕೃಷ್ಣ ಅವರ ಕೈಗೆ ಶಕ್ತಿ ಬಂದಿದೆ. ನೀವು ಕೊಟ್ಟ ಮತಕ್ಕೆ ಅಭಿವೃದ್ದಿ ಮುಖಾಂತರ ಮರಳಿ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ನೀಡಿದ ಮತಕ್ಕಿಂತ ಹೆಚ್ಚಿನ ಮತ ನೀಡಿ 2028 ರಲ್ಲಿ ಗೆಲ್ಲಿಸಬೇಕು. ಇದೇ ನೀವು ನನಗೆ ನೀಡುವ ಸನ್ಮಾನ, ಗದೆ” ಎಂದರು.