ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭಾಗಿ
ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ ಎಂದ ಕೇಂದ್ರ ಸಚಿವರು
ಅಧ್ಯಾತ್ಮ, ತ್ರಿವಿಧ ದಾಸೋಹದ ಇತಿಹಾಸದಲ್ಲಿ ಹಿರಿಯ ಶ್ರೀಗಳು ಅಜರಾಮರ ಧ್ರುವತಾರೆ ಎಂದ ಹೆಚ್ಡಿಕೆ
ಶ್ರೀ ಕ್ಷೇತ್ರ ಆದಿಚುಂಚನಗಿರಿ 15 ಮಾರ್ಚ್ 2026
ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯ ರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀಮಠದ 71ನೆ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವು ಜಾಗತಿಕ ನಾಯಕತ್ವ ಆಗಿದ್ದು. ಅವರ ನೇತೃತ್ವದಲ್ಲಿ ಭಾರತ ಪರಿವರ್ತನಾತ್ಮಕ ಅಭಿವೃದ್ಧಿ ಕಾಣುತ್ತಿದೆ. ಬದಲಿಗೆ ಲಕ್ಷಾಂತರ ಭಾರತೀಯರ ಹೃದಯದಲ್ಲಿ ಅವರ ನಾಯಕತ್ವದ ಶ್ರೇಷ್ಠತೆಯು ಆಳವಾಗಿ ಬೇರೂರಿದೆ ಎಂದು ಕುಮಾರಸ್ವಾಮಿ ಅವರು ಬಣ್ಣಿಸಿದರು.
ಪ್ರಧಾನಿಗಳ ದಣಿವರಿಯದ ಸಮರ್ಪಣೆ ಮತ್ತು ಆಡಳಿತದಲ್ಲಿ ಭಾರತೀಯರು ಶಕ್ತಿ, ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಎಲ್ಲಾ ಆಯಾಮಗಳಲ್ಲಿಯೂ ಭಾರತವು ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದ ಸಚಿವರು, ಶ್ರೀಮಠಕ್ಕೆ ಭೇಟಿ ನೀಡಿ ಹಿರಿಯ ಗುರುಗಳಿಗೆ ಪ್ರಧಾನಿಗಳು ಗೌರವ ಸಲ್ಲಿಸುತ್ತಿರುವುದು ನನಗೆ ಅತಿವ ಸಂತೋಷ ಉಂಟು ಮಾಡಿದೆ ಎಂದರು.
ಕರ್ನಾಟಕದ ಅಧ್ಯಾತ್ಮ ಮತ್ತು ತ್ರಿವಿಧ ದಾಸೋಹದ ಇತಿಹಾಸದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಜಿ ಅವರು ಅಜರಾಮರ ಧ್ರುವತಾರೆ ಆಗಿದ್ದಾರೆ ಎಂದು ನಾನು ಭಕ್ತಿಪೂರ್ವಕವಾಗಿ ಹೇಳಬಯಸುತ್ತೇನೆ. ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡಮಕ್ಕಳ ಪಾಲಿಗೆ ಜ್ಞಾನದ ಬೆಳಕಾಗಿ, ಅಸಂಖ್ಯಾತ ಬಡ ಕುಟುಂಬಗಳ ಪ್ರತ್ಯಕ್ಷ ದೈವವಾಗಿ ಮಹಾಸ್ವಾಮೀಜಿ ಅವರು ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಹಿರಿಯ ಶ್ರೀಗಳನ್ನು ಸಚಿವರು ಸ್ಮರಿಸಿದರು.
ಅಧ್ಯಾತ್ಮದ ಜೊತೆಗೆ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಜೀವಿತ ಕಾಲದ ಉದ್ದಕ್ಕೂ ಅವಿರತವಾಗಿ ದುಡಿದ ಮಹಾಸ್ವಾಮಿಗಳು, ತಮ್ಮ ಸಾಧನೆ ಮತ್ತು ಸಂದೇಶಗಳ ಮೂಲಕ ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ. ಸಣ್ಣ ಮಠವಾಗಿದ್ದ ಶ್ರೀ ಆದಿಚುಂಚನಗಿರಿ ಕ್ಷೇತ್ರವನ್ನು ಜಾಗತಿಕ ಶ್ರದ್ಧಾಕೇಂದ್ರವನ್ನಾಗಿ ಬೆಳೆಸಿ ಮಹಾವೃಕ್ಷವನ್ನಾಗಿ ರೂಪಿಸಿದ 71ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆ ಮಾಡುವ ಈ ಪರಮಪುಣ್ಯ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಧಾನಮಂತ್ರಿಗಳು ಹಾಗೂ ಜಗತ್ತಿನ ಶ್ರೇಷ್ಠ ನಾಯಕರಾದ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು ಸಚಿವರು.
ಕರ್ನಾಟಕದಲ್ಲಿ ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೌನ ಕ್ರಾಂತಿಯನ್ನು ಮಾಡಿದವರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು, ಜೋಳಿಗೆ ಹಿಡಿದು ಹಳ್ಳಿಹಳ್ಳಿಯನ್ನು ಸುತ್ತಿದ್ದ ರೈತಾಪಿ ಮಕ್ಕಳ ಜ್ಞಾನಾರ್ಜನೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಗುಣಮಟ್ಟದ ಆರೋಗ್ಯ ಸೇವೆಯನ್ನು ಹಳ್ಳಿಗಳಿಗೂ, ಅದರಲ್ಲಿ ಬಡರೈತರ ಮನೆ ಬಾಗಿಲಿಗೆ ವಿಸ್ತರಿಸಿದ ಖ್ಯಾತಿ ಪರಮಪೂಜ್ಯರದು ಎಂದು ನಾನು ಗೌರವಾನ್ವಿತ ಪ್ರಧಾನಿಗಳ ಗಮನಕ್ಕೆ ತರ ಬಯಸುತ್ತೇನೆ ಎಂದು ಕುಮಾರಸ್ವಾಮಿ ಅವರು ಬಣ್ಣಿಸಿದರು.
ಪರಿಸರ ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರದು ಅನನ್ಯ ಕೊಡುಗೆ. ಸುಮಾರು ಐದು ಕೋಟಿ ಸಸಿಗಳನ್ನು ಬೆಳೆಸಿದ ಮಹಾನ್ ತಪಸ್ವಿ ಅವರು. ಅವರು ನೆಟ್ಟ ಸಣ್ಣಸಣ್ಣ ಸಸಿಗಳು ಇಂದು ಮಹಾವೃಕ್ಷಗಳಾಗಿ ಬೆಳೆದಿವೆ. ಶ್ರೀ ಆದಿಚುಂಚನಗಿರಿ ಕ್ಷೇತ್ರ ಬಹುವಿಧದ ದಾಸೋಹಗಳಲ್ಲಿ ದೊಡ್ಡ ಹೆಸರು. ಕಷ್ಟ ಎಂದು ಬರುವ ದೀನರಿಗೆ ಕಲ್ಪವೃಕ್ಷವಾಗಿದೆ. ಜ್ಞಾನ ಎಂದು ಬರುವವರೆಗೆ ಕಾಮಧೇನು. ಸನಾತನ ಪರಂಪರೆ ಮತ್ತು ಆಧುನಿಕತೆಯ ಮಹಾಸಂಗಮವಾಗಿ, ಮೇರು ಮಹಾ ಪುಣ್ಯಕ್ಷೇತ್ರವಾಗಿ ಇಂದು ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಸಚಿವರು ನುಡಿದರು.



