ಸಾವಿರಾರು ಕೋಟಿ ಆಸ್ತಿ ಒಡೆಯ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಐಟಿ ದಾಳಿ ವೇಳೆ ಬೆಂಗಳೂರಿನ ಲ್ಯಾಂಗ್ಫೋರ್ಡ್ ಟೌನ್ನಲ್ಲಿರುವ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಯ್ ಆತ್ಮಹತ್ಯೆ ಸಂಬಂಧ ಅಶೋಕ್ ನಗರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ. ಬೆಂಗಳೂರು ಮಡಿವಾಳ ಉಪ ವಿಭಾಗ ACP ವಾಸುದೇವ ತಂಡ ರಾಯ್ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದಿದ್ದು, IT ದಾಳಿ ನಂತರ ಯಾರ್ಯಾರಿಗೆ ಕರೆ ಮಾಡಲಾಗಿದೆ ಎಂದು ಪರಿಶೀಲನೆ ನಡೆಸಿದ್ದಾರೆ.
ಸಿ.ಜೆ ರಾಯ್ ಆತ್ಮಹತ್ಯೆಗೆ ಐಟಿ ದಾಳಿ ಕಾರಣ ಎಂದು ಎನ್ನಲಾಗುತ್ತಿದೆ. ಆದರೆ ಖ್ಯಾತ ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಹಿಂದೆ ಅನುಮಾನದ ಹುತ್ತವೇ ಬೆಳೆದು ನಿಂತಿದೆ. ಹಾಗಾಗಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ.
ಅಶೋಕ್ ನಗರ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಪೊಲೀಸರು ರಾಯ್ ಕುಟುಂಬಸ್ಥರನ್ನು ವಿಚಾರಣೆ ನಡೆಸ್ತಿದ್ದಾರೆ. ಸಿಜೆ ರಾಯ್ ಕಚೇರಿಯಲ್ಲಿ ಮಹತ್ವದ ಡೈರಿ ಪತ್ತೆಯಾಗಿದ್ದು, ಡೈರಿಯಲ್ಲಿ ರಾಜಕಾರಣಿಗಳು, ನಟ-ನಟಿಯರ ಹೆಸರು ಉಲ್ಲೇಖವಿದೆ.
ರಾಯ್ ಅವರ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಂದು ಬೆಳಿಗ್ಗೆ 10 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕುಟುಂಬ ಸದಸ್ಯರು ದುಬೈನಿಂದ ಆಗಮಿಸಿದ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.


