Tuesday, June 2, 2026
22.6 C
Belagavi

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಹೇಳಿಕೆ

advertisement

spot_img

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಹೇಳಿಕೆ

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿರುವುದು ಆರ್ಥಿಕ ಕ್ಷೇತ್ರದ ಬಗೆಗಿನ ಅವರ ಅಜ್ಞಾನ, ಆಡಳಿತದ ಅನುಭವದ ಕೊರತೆ ಮತ್ತು ರಾಜಕೀಯ ಹತಾಶೆಯನ್ನು ತೋರಿಸುತ್ತದೆ.

ಕಳೆದ ತಿಂಗಳಷ್ಟೇ ಈ ಆರ್ಥಿಕ ವರ್ಷದ ಆಯವ್ಯಯಪತ್ರವನ್ನು ನಾನು ಮಂಡಿಸಿದ್ದೇನೆ, ಅದು ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ. ಆ ಆಯವ್ಯಯವನ್ನು ವಿಧಾನಮಂಡಲದ ಉಭಯ ಸದನಗಳು ಒಪ್ಪಿಕೊಂಡು ಅಂಗೀಕರಿಸಿವೆ. ಇದೇ ನಮ್ಮ ಶ್ವೇತಪತ್ರ.

ಇದರ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕೂಲಂಕಷವಾಗಿ ಚರ್ಚೆ ನಡೆದಿದೆ. ವಿಜಯೇಂದ್ರ ಅವರ ಪಕ್ಷದವರೂ ಸೇರಿದಂತೆ 21 ಜನ ವಿರೋಧ ಪಕ್ಷದ ಸದಸ್ಯರೂ ಮಾತನಾಡಿ ಎತ್ತಿದ್ದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದೇನೆ. ಇದರ ಬಗ್ಗೆ ಇನ್ನೂ ನಿಮಗೆ ಅನುಮಾನಗಳಿದ್ದರೆ ವಿವರಣೆ ಕೊಡಲು ನಾನು ಸಿದ್ಧನಿದ್ದೇನೆ. ಉಪಚುನಾವಣೆಯ ಅಖಾಡದಲ್ಲಿಯೇ ನಿಮ್ಮ ಜೊತೆ ಬಹಿರಂಗ ಚರ್ಚೆಗೂ ನಾನು ಸಿದ್ಧನಿದ್ದೇನೆ. ದಯವಿಟ್ಟು ಕೇವಲ ರಾಜಕೀಯ ಮಾತನಾಡಬೇಕೆಂಬ ಬಾಯಿ ಚಪಲಕ್ಕಾಗಿ ಆಯವ್ಯಯ ಪತ್ರದ ಪಾವಿತ್ರ್ಯವನ್ನು ಹಾಳು ಮಾಡಲು ಹೋಗಬೇಡಿ.

ರಾಜ್ಯ ದಿವಾಳಿ ಸ್ಥಿತಿಯಲ್ಲಿದೆ ಎಂಬ ಆರೋಪದ ಹಿಂದೆ ನಮ್ಮ ಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ನಾಯಕರ ಅಸಹಾಯಕತೆ, ಹತಾಶೆ ಮತ್ತು ಅಸೂಯೆ ಇದೆ. ಯಾವ ಇಲಾಖೆಯೂ ನೌಕರರಿಗೆ ಸಂಬಳ ನೀಡಲಾಗದ ದಿವಾಳಿ ಸ‍್ಥಿತಿಯಲ್ಲಿಲ್ಲ. ನಮ್ಮ ಸರ್ಕಾರ ಆರ್ಥಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ಸುಭದ್ರವಾಗಿದೆ. ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ.

ವಿಜಯೇಂದ್ರ ಅವರೇ, ಕರ್ನಾಟಕದ ಆರ್ಥಿಕ ಸ್ಥಿತಿ ನಿಮ್ಮ ಪಕ್ಷದ ಆಡಳಿತ ಇರುವ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಈ ವರ್ಷದ ನಮ್ಮ ಬಜೆಟ್ ಗಾತ್ರ ರೂ.4,48,004 ಕೋಟಿಗಳಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಾತ್ರಕ್ಕಿಂತ 38,455 ಕೋಟಿ ರೂ. ಗಳಷ್ಟು ಹೆಚ್ಚಿನದ್ದಾಗಿದೆ. ನಮ್ಮ ಬಜೆಟ್ ಗಾತ್ರದಲ್ಲಿ ಶೇ.9.4ರಷ್ಟು ಬೆಳವಣಿಗೆಯಾಗಿದ್ದರೆ, ಕೇಂದ್ರ ಸರ್ಕಾರದ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.5.6ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷ ₹50.66 ಲಕ್ಷ ಕೋಟಿಗಳ ಬಜೆಟ್ ಮಂಡಿಸಿದ್ದ ಕೇಂದ್ರ ಸರ್ಕಾರ ಈ ವರ್ಷ 53.47 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ನಮ್ಮ ಬಜೆಟ್ ಗಾತ್ರ ಆರ್ಥಿಕ ಪ್ರಗತಿಯನ್ನು ಸೂಚಿಸುತ್ತಿದೆ. ಆರ್ಥಿಕ ಹಿಂಜರಿತ ಇದ್ದಿದ್ದರೆ ಈ ಪ್ರಗತಿ ಸಾಧ್ಯವಾಗುತ್ತಿತ್ತೇ?

2025-26 ರಲ್ಲಿ ದೇಶದ ಜಿಡಿಪಿಯ ಬೆಳವಣಿಗೆ ಶೇ.7.4 ರಷ್ಟಿದ್ದರೆ, ರಾಜ್ಯದ ಜಿ.ಎಸ್.ಡಿ.ಪಿಯು ಶೇ.8.1 ರಷ್ಟು ಬೆಳವಣಿಗೆ ದಾಖಲಿಸಿದೆ. ಕರ್ನಾಟಕದ ಜಿಎಸ್‌ಡಿಪಿ ದೇಶದ ಜಿಡಿಪಿ ಬೆಳವಣಿಗೆಗಿಂತ ಹೆಚ್ಚಿರುವುದು ನಮ್ಮ ಸರ್ಕಾರದ ಆರ್ಥಿಕ ಸುಭದ್ರತೆಗೆ ಸಾಕ್ಷಿಯಾಗಿದೆ. ಈ ವರ್ಷ ನಮ್ಮ ಜಿ.ಎಸ್.ಡಿ.ಪಿ ರೂ. 33,05,500 ಕೋಟಿಯಷ್ಟಿದೆ.
ನಾನು ಮಂಡಿಸಿರುವ ಹದಿನೇಳು ಬಜೆಟ್ ಗಳಲ್ಲಿಯೂ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೇನೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮಕ್ಕೆ ಅನುಗುಣವಾಗಿ ನಮ್ಮ ಒಟ್ಟು ಹೊಣೆಗಾರಿಕೆಗಳು ಜಿ.ಎಸ್.ಡಿ.ಪಿ.ಯ ಶೇಕಡಾ 25 ರೊಳಗೆ ಇರಬೇಕು, ನಮ್ಮದು ಶೇ.24.94 ರಷ್ಟಿದೆ. ಕೇಂದ್ರ ಸರ್ಕಾರದ ಹೊಣೆಗಾರಿಕೆಗಳು ಜಿ.ಡಿ.ಪಿ.ಯ ಶೇಕಡಾ 40 ರೊಳಗೆ ಇರಬೇಕಾಗುತ್ತದೆ. ಅದು ಶೇ.55.6 ರಷ್ಟಿದೆ. ದಿವಾಳಿಯಾಗಿರುವುದು ಯಾವ ಸರ್ಕಾರ?

16ನೇ ಹಣಕಾಸು ಆಯೋಗದ ಮಾರ್ಗಸೂಚಿಯ ಅನುಸಾರ ವಿತ್ತೀಯ ಕೊರತೆ ರಾಜ್ಯಗಳಲ್ಲಿ ಜಿಎಸ್‌ಡಿಪಿಯ ಶೇ.3 ರೊಳಗೆ ಹಾಗೂ ಕೇಂದ್ರ ಸರ್ಕಾರ ಜಿಡಿಪಿಯ ಶೇ.4.2 ರೊಳಗೆ ಇರಬೇಕು. ನಮ್ಮ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಒಳಗೆ ಇದೆ. ಆದರೆ ಕೇಂದ್ರದ ವಿತ್ತೀಯ ಕೊರತೆ ಜಿ.ಡಿ.ಪಿ.ಯ ಶೇ.4.3 ರಷ್ಟಿದೆ.

ವಿಜಯೇಂದ್ರ ಅವರೇ ದಯವಿಟ್ಟು ಒಮ್ಮೆ ನಿಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳ ಆರ್ಥಿಕತೆಯ ಮೇಲೆ ಕಣ್ಣಾಡಿಸಿಕೊಂಡು ಬನ್ನಿ. ಮಹಾರಾಷ್ಟ್ರದ ಸಾಲ ಬಾಕಿ ರೂ.11.02 ಲಕ್ಷ ಕೋಟಿಯಷ್ಟಿದ್ದರೆ, ಬಿಹಾರದ ವಿತ್ತೀಯ ಕೊರತೆ ಜಿಎಸ್ ಡಿಪಿ ಶೇ.11.8ರಷ್ಟಿದೆ. ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇಕಡಾ 3.7ರಷ್ಟಿದೆ. ಬಿಜೆಪಿ ಆಳ್ವಿಕೆಯ ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರಗಳಿರಲಿ ಆರ್ಥಿಕ ದಿವಾಳಿತನವೇ ಬಿಜೆಪಿ ಆಡಳಿತದ ಮುಖ್ಯ ಗುರುತಾಗಿದೆ.

ನಮ್ಮನ್ನು ರಾಜಕೀಯವಾಗಿ ಹಣಿಯಬೇಕೆಂಬ ದುರುದ್ದೇಶದಿಂದ ಕೇಂದ್ರ ಸರ್ಕಾರ ಸತತವಾಗಿ ಕರ್ನಾಟಕಕ್ಕೆ ಹೊಡೆತದ ಮೇಲೆ ಹೊಡೆತ ಕೊಡುತ್ತಿದೆ. ತೆರಿಗೆ ಹಂಚಿಕೆ, ಜಿಎಸ್ ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನದಲ್ಲಿ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ.

ಹದಿನಾಲ್ಕನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪಾಲನ್ನು ಶೇಕಡಾ 4.72ಕ್ಕೆ ನಿಗದಿಗೊಳಿಸಿತ್ತು, ಹದಿನೈದನೇ ಹಣಕಾಸು ಆಯೋಗ 3.64ಕ್ಕೆ ಇಳಿಸಿತ್ತು. ನಮ್ಮ ತೀವ್ರ ಪ್ರತಿಭಟನೆಯ ನಂತರ ಹದಿನಾರನೇ ಹಣಕಾಸು ಆಯೋಗ ಈಗ ತೆರಿಗೆ ಹಂಚಿಕೆಯ ಪಾಲನ್ನು ಶೇಕಡಾ 4.13ಕ್ಕೆ ನಿಗದಿಗೊಳಿಸಿದೆ. ಅತ್ಯಂತ ಹೆಚ್ಚು ತೆರಿಗೆ ಸಂಗ್ರಹಿಸುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ದುರುದ್ದೇಶದಿಂದ ಈ ಅನ್ಯಾಯ ಎಸಗಿದರೂ ರಾಜ್ಯದ ಬಿಜೆಪಿ ನಾಯಕರಾಗಲಿ, ಆ ಪಕ್ಷದ ಸಂಸದರಾಗಲಿ ಬಾಯಿ ಬಿಚ್ಚದೆ ಕರ್ನಾಟಕ ರಾಜ್ಯದ ಜನತೆಗೆ ದ್ರೋಹ ಎಸಗುತ್ತಿದ್ದಾರೆ.

ಜಿ.ಎಸ್.ಟಿ. ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದು ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸಿನಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.
ಕೇಂದ್ರ ಸರ್ಕಾರವು 2023-24ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳಿಸಿದ್ದರಿಂದ, ಕೇಂದ್ರ ಸರ್ಕಾರ ಅಂದಾಜಿಸಿದ್ದ ಜಿ.ಎಸ್.ಟಿ. ಸಂಗ್ರಹಣೆಗೆ ಹೋಲಿಸಿದರೆ, ರಾಜ್ಯದ ಜಿ.ಎಸ್.ಟಿ ಸಂಗ್ರಹಣೆಯು 2023-24ರಲ್ಲಿ 30,871 ಕೋಟಿ ರೂ.ಗಳು ಮತ್ತು 2024-25ರಲ್ಲಿ 40,368 ಕೋಟಿ ರೂ.ಗಳು ಕೊರತೆಯಾಗಿರುತ್ತದೆ. 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 2023-24ರಿಂದ 2025-26ರವರೆಗೆ 39,500 ಕೋಟಿ ರೂ.ಗಳು ನಷ್ಟವಾಗಿರುತ್ತದೆ. ಇದರ ಪರಿಣಾಮವಾಗಿ, 2023-24ರಿಂದ ರಾಜಸ್ವ ಕೊರತೆಯನ್ನು ಎದುರಿಸುವಂತಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-2022) ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡಿತ್ತು. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಒಟ್ಟು ಪರಿಹಾರ 57,351 ಕೋಟಿ ರೂ.ಗಳು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2023ರಿಂದ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ನೀಡುವುದನ್ನು ನಿಲ್ಲಿಸಿರುತ್ತದೆ. ಆದಕಾರಣ ರಾಜ್ಯದ ರಾಜಸ್ವ ಸಂಗ್ರಹಣೆ ಕಡಿಮೆಯಾಗಿ ರಾಜಸ್ವ ಕೊರತೆಯನ್ನು ಎದುರಿಸಬೇಕಾಯಿತು.

2017ರಲ್ಲಿ ಜಿಎಸ್‌ಟಿ ಜಾರಿಯಾದಾಗಿನಿಂದ, 15ನೇ ಹಣಕಾಸು ಆಯೋಗ ಮಾಡಿದ ಅನ್ಯಾಯದಿಂದ, 15ನೇ ಹಣಕಾಸು ಆಯೋಗ ಮಾಡಿದ ಶಿಫಾರಸ್ಸುಗಳನ್ನು ಜಾರಿ ಮಾಡದೆ ಕೇಂದ್ರವು ಮಾಡಿದ ದ್ರೋಹದಿಂದ, ಜಿಎಸ್‌ಟಿ ಪರಿಹಾರ ನೀಡದ ಕಾರಣ ಸುಮಾರು 2,00,000 ಕೋಟಿ ರೂ.ಗಳಿಗೂ ಹೆಚ್ಚಿನ ನಷ್ಟ ರಾಜ್ಯಕ್ಕೆ ಉಂಟಾಗಿದೆ. ಕೇಂದ್ರ ಸರ್ಕಾರ ಅನುಸರಿಸುತ್ತಾ ಬಂದಿರುವ ಒಕ್ಕೂಟ ವಿರೋಧಿ ಧೋರಣೆಯ ಹೊರತಾಗಿಯೂ ರಾಜ್ಯದ ಆರ್ಥಿಕತೆ ಎಲ್ಲಿಯೂ ಹಳಿ ತಪ್ಪದಂತೆ ಎಚ್ಚರಿಕೆ ಮತ್ತು ಬದ್ಧತೆಯಿಂದ ಮುನ್ನಡೆಸುತ್ತಾ ಬಂದಿದ್ದೇವೆ.

ಕಳೆದ ವರ್ಷ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಾಡಿದ ಜಿಎಸ್‌ಟಿ ದರಗಳ ಪರಿಷ್ಕರಣೆಯಿಂದಾಗಿ ರಾಜ್ಯದ ಆರ್ಥಿಕತೆಯ ಮೇಲೆ ಹೊಡೆತ ಬಿತ್ತು. ಈ ಪರಿಷ್ಕರಣೆಗೆ ಮುನ್ನ, ರಾಜ್ಯದ ಸರಾಸರಿ ಮಾಸಿಕ ಜಿ.ಎಸ್.ಟಿ ಸಂಗ್ರಹಣೆಯು ಶೇ.10ರಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಆದರೆ ದರ ಪರಿಷ್ಕರಣೆಯ ನಂತರ, ಜಿ.ಎಸ್.ಟಿ ಸಂಗ್ರಹಣೆಯ ಮಾಸಿಕ ಬೆಳವಣಿಗೆಯು ಶೇ.4ರಷ್ಟು ಕಡಿಮೆಯಾಗಿದೆ. 2025-26ನೇ ಸಾಲಿನಲ್ಲಿ ಸುಮಾರು ₹10,000 ಕೋಟಿ ಕೊರತೆಯಾದರೆ, 26-27ರಲ್ಲಿ 15,000 ಕೋಟಿ ರೂ.ಗಳಷ್ಟು ಕೊರತೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇದು ನಮ್ಮ ರಾಜಸ್ವ ಕೊರತೆಗೆ ಪ್ರಮುಖ ಕಾರಣ.

ಕೇಂದ್ರ ಸರ್ಕಾರ ನಡೆಸಿದ ಜಿಎಸ್‌ಟಿ ದರ ಪರಿಷ್ಕರಣೆಯಿಂದ ಸಾಮಾನ್ಯ ಜನರಿಗೆ ಯಾವ ಲಾಭವೂ ಆಗಿಲ್ಲ. ಕಾರು, ಬೈಕುಗಳ ಖರೀದಿ ಮಾಡಿದವರಿಗೆ ಸ್ವಲ್ಪ ಲಾಭವಾಗಿರಬಹುದು. ಇದರ ಬಹುತೇಕ ಲಾಭವನ್ನು ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪೊರೇಟ್ ಕುಳಗಳು ಹೊತ್ತುಕೊಂಡು ಹೋಗುತ್ತಿವೆ. ಇಷ್ಟರ ನಡುವೆಯೂ ಕಳೆದ ವರ್ಷದ ಆಯವ್ಯಯಕ್ಕಿಂತ ಸುಮಾರು 22,573 ಕೋಟಿ ರೂ. ಹೆಚ್ಚಿನ ರೆವಿನ್ಯೂ ಸಂಗ್ರಹವಾಗಬಹುದೆಂದು ಅಂದಾಜಿಸಿದ್ದೇವೆ.

ನಾನು ಎಂದೂ ಸಾಲ ಮಾಡಬಾರದು ಎಂದು ಹೇಳಿಲ್ಲ, ಹೇಳುವುದೂ ಇಲ್ಲ. ಎಲ್ಲ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲೂ ಸಾಲ ದೊಡ್ಡ ಪ್ರಮಾಣದಲ್ಲೇ ಇದೆ. ಆದರೆ ಮಾಡುವ ಸಾಲದ ಹಣವನ್ನು ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗಾಗಿ ಹೂಡಿಕೆ ಮಾಡಿದಾಗ ಅದರಿಂದ ಬರುವ ಪ್ರತ್ಯಕ್ಷ ಮತ್ತು ಪರೋಕ್ಷ ಗಳಿಕೆ ಆರ್ಥಿಕತೆಯನ್ನು ಇನ್ನಷ್ಟು ಸದೃಡಗೊಳಿಸುತ್ತದೆ.

ಕೇಂದ್ರ ಸರ್ಕಾರವೂ ತನ್ನ ವೆಚ್ಚ ನಿರ್ವಹಣೆಗೆ ಸಾಲದ ಮೇಲೆ ಅವಲಂಬಿತವಾಗಿದೆ. ಕೇಂದ್ರ ಸರ್ಕಾರ ಮಾಡಿದ ಸಾಲ 2014 ರ ಮಾರ್ಚ್ ಗೆ ಹೋಲಿಸಿದರೆ 2027 ರ ಮಾರ್ಚ್ ವೇಳೆಗೆ 165.52 ಲಕ್ಷ ಕೋಟಿ ರೂಗಳಷ್ಟು ಹೆಚ್ಚಾಗಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಇದ್ದ 53.11 ಲಕ್ಷ ಕೋಟಿ ರೂ. ಸಾಲ ಈಗ 218.63 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಮೋದಿಯವರು ದೇಶವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ. ಈ ವರ್ಷ 16,96,000 ಕೋಟಿ ಸಾಲ ಮಾಡಿದ್ದಾರೆ. ನಿಯಮಗಳ ಪ್ರಕಾರ ಸಾಲದ ಮೊತ್ತ 40 ರಷ್ಟಿರಬೇಕಿದ್ದು, ಕೇಂದ್ರದ ಈ ಪ್ರಮಾಣ 56 ರಷ್ಟು ಹೆಚ್ಚಿದೆ.

ವಿಜಯೇಂದ್ರ ಅವರೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದ ಸಾಲವನ್ನೊಮ್ಮೆ ಹಿಂದಿರುಗಿ ಹೋಗಿ ನೋಡಿ. ಕೊರೋನ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದ ನಾವು ಪ್ರತಿ ಕುಟುಂಬಕ್ಕೆ 10,000 ರೂ. ಕೊಡಿ ಜನರ ಕೈಯಲ್ಲಿ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟ ಸ್ವಲ್ಪವಾದರೂ ಕಡಿಮೆಯಾಗಲಿ ಎಂದು ಹೇಳಿದರೆ ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಕೇಳಲಿಲ್ಲ. ಆದರೂ ಸಾಲ ಮಾಡಿ ಮಾಡಿದ್ದೇನು? ಒಂದು ರಸ್ತೆ ಸರಿ ಮಾಡಲಿಲ್ಲ.

ತಮ್ಮ 4 ವರ್ಷಗಳ 2019-23 ರ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಕೇವಲ 5 ಹಾಸ್ಟೆಲ್‌ಗಳನ್ನು ಕೊಟ್ಟಿದ್ದೀರಿ. 2,832 ಹೊಸ ಬಸ್ಸುಗಳನ್ನು ಕೊಂಡುಕೊಳ್ಳಲಾಯಿತು. ನಾಲ್ಕು ವರ್ಷಗಳಲ್ಲಿ 5.75 ಲಕ್ಷ ಮನೆಗಳನ್ನು ನಿರ್ಮಿಸಿದರು. ಹೊಸ ಆಸ್ಪತ್ರೆಗಳಿರಲಿಲ್ಲ. ವೈದ್ಯರ ನೇಮಕಾತಿ ಇರಲಿಲ್ಲ. ಹೀಗಿದ್ದರೂ ಬಿಜೆಪಿ ಸರ್ಕಾರ 2023ರಲ್ಲಿ 5,53,363 ಕೋಟಿ ರೂಗಳಷ್ಟು ಬಾಕಿ ಸಾಲವನ್ನು ಉಳಿಸಿಹೋಗಿತ್ತು.

ಬಿಜೆಪಿ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅರ್ಥಿಕತೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ ಯಾರು ಆರ್ಥಿಕತೆಯನ್ನು ದಿವಾಳಿ ಸ್ಥಿತಿಗೆ ತಳ್ಳಿದವರು ಎನ್ನುವುದು ಸ್ಪಷ್ಟವಾಗುತ್ತದೆ. ವಿಜಯೇಂದ್ರ ಅವರೇ ಇನ್ನೊಮ್ಮೆ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೊದಲು ಸ್ವಲ್ಪ ಹೋಮ್ ವರ್ಕ್ ಮಾಡಿಕೊಂಡು ಬನ್ನಿ, ಮಾತನಾಡೋಣ.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img