ಡಾ.ಎಚ್.ಸಿ. ಸತ್ಯಂಗೆ ನಾಡೋಜ ನೀಡೋಕು ಮುನ್ನ ಪರಿಶೀಲಿಸಿ : ರಾಜ್ಯಪಾಲರಿಗೆ ಸಾರ್ವಜನಿಕ ಹೊಣೆಗಾರಿಕೆ ಸಮಿತಿ ಪತ್ರ..
ಬೆಂಗಳೂರು : ಡಾ.ಎಚ್..ಸಿ. ಸತ್ಯಂ ಅವರಿಗೆ ಹಂಪಿ ವಿಶ್ವವಿದ್ಯಾಲಯವು ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನು ನೀಡುವ ತೀರ್ಮಾನ ಹಿಂಪಡೆಯಬೇಕೆಂದು ಸಾರ್ವಜನಿಕ ಹೊಣೆಗಾರಿಕೆ ಸಮಿತಿಯು ಒತ್ತಾಯಿಸಿದೆ. ಈ ಕುರಿತು ಹಂಪಿ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರ ಬರೆದು ಆಗ್ರಹಿಸಿರುವ ಸಮಿತಿಯು, ಸತ್ಯಂ ಅವರಿಗೆ ಯಾವ ಮಾನದಂಡದ ಆಧಾರದ ಮೇಲೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದೆ? ನಾಡೋಜ ಪ್ರಶಸ್ತಿಯು ಅತ್ಯಂತ ಗೌರವಯುತವಾಗಿದ್ದು, ಅಲ್ಲದೆ ಸಜ್ಜನ ವ್ಯಕ್ತಿತ್ವದವನ್ನು ಪ್ರತಿಬಿಂಬಿಸುತ್ತದೆ.

ಹೀಗಾಗಿ ಇಂತಹ ಅತ್ತ್ಯುತ್ತಮವಾಗಿರುವ ಪ್ರಶಸ್ತಿಯನ್ನು ನೀಡುವ ವಿಚಾರದಲ್ಲಿ ನೀವು ಶೈಕ್ಷಣಿಕ ಸಮುದಾಯ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ. ನೀವು ಪ್ರಶಸ್ತಿ ನೀಡಲು ಉದ್ದೇಶಿಸಿರುವ ವ್ಯಕ್ತಿಯ ವಿರುದ್ಧ ಕರ್ನಾಟಕ ಲೋಕಾಯುಕ್ತ ಮತ್ತು ಇತರ ನ್ಯಾಯಾಂಗ ವೇದಿಕೆಗಳ ಮುಂದೆ ಡಾ. ಎಚ್. ಸಿ. ಸತ್ಯಂ ಅವರ ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇವೆ ಎಂದು ತಿಳಿದು ಬಂದಿದೆ. ಇಂತಹ ಕಾನೂನಿನ ವಿಚಾರಣೆಗಳು ನಿಜವಾಗಿಯೂ ಬಾಕಿ ಇದ್ದರೆ, ಈ ಸ್ಥಾನಮಾನದ ಗೌರವವನ್ನು ನೀಡುವ ಮೊದಲು ಎಚ್ಚರಿಕೆಯಿಂದ ನಿರ್ಧಾರ ಮಾಡಬೇಕಿದೆ ಎಂದು ತಿಳಿಸಿದೆ.
ಗುರುತರ ಆರೋಪವಿರುವ ಹಾಗೂ ಗಂಭೀರ ಪ್ರಕರಣಗಳಲ್ಲಿ ಆರೋಪಿತರಾಗಿರುವವರಿಗೆ ವಿಶೇಷ ಮನ್ನಣೆಯನ್ನು ನೀಡುವುದು ಸೂಕ್ತವಲ್ಲ. ನಿಮ್ಮ ಅಜಾಗರೂಕತೆಯಿಂದ ಪ್ರಶಸ್ತಿಯ ಘನತೆ, ವಿಶ್ವವಿದ್ಯಾಲಯದ ಖ್ಯಾತಿ ಮತ್ತು ಕರ್ನಾಟಕದ ಶೈಕ್ಷಣಿಕ ಮತ್ತು ಸಾರ್ವಜನಿಕ ಸಂಸ್ಥೆಗಳ ಗೌರವಕ್ಕೆ ಅಪಖ್ಯಾತಿ ತರಬಹುದು ಎಂದು ಸಾರ್ವಜನಿಕ ಹೊಣೆಗಾರಿಕೆ ಸಮಿತಿಯು ಎಚ್ಚರಿಸುವ ಮೂಲಕ ಸತ್ಯಂ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದೆ.
ಅಲ್ಲದೆ ಈ ವರ್ಷದ ನಾಡೋಜ ಪ್ರಶಸ್ತಿಯ ಆಯ್ಕೆ ವಿಚಾರದಲ್ಲಿ ನೀವು ಅನುಸರಿಸಿರುವ ಮಾನದಂಡ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಸಾರ್ವಜನಿಕಗೊಳಿಸಬೇಕು. ನಾಮನಿರ್ದೇಶಿತರಿಗೆ ಸಂಬಂಧಿಸಿದಂತೆ ನಡೆಸಲಾದ ಶ್ರದ್ಧೆ, ವಿಜಿಲೆನ್ಸ್ ಕ್ಲಿಯರೆನ್ಸ್ ಮತ್ತು ಅವರ ಹಿನ್ನೆಲೆ ಪರಿಶೀಲನೆಯನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕು. ಯಾವುದೇ ಕಾನೂನು ವಿಚಾರಣೆ ಅಥವಾ ಇನ್ನಿತರ ಪ್ರಕರಣಗಳು ನ್ಯಾಯಾಲಯದ ವ್ಯಾಪ್ತಿಯಲ್ಲಿ ಉಳಿದಿದ್ದರೆ, ಅವುಗಳ ಕೂಲಂಕುಷ ಪರಿಶೀಲನೆ ಮಾಡುವ ಮೂಲಕ ಸತ್ಯಾಸತ್ಯತೆ ಹೊರ ಬರುವವರೆಗೆ ಪ್ರಶಸ್ತಿ ಪ್ರದಾನವನ್ನು ಮುಂದೂಡಬೇಕು ಎಂದು ಆಗ್ರಹಿಸಿದೆ.
ಇನ್ನೂ ನಾಡೋಜ ಪ್ರಶಸ್ತಿಯು ವಿಶ್ವವಿದ್ಯಾನಿಲಯವು ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ಇದು ವ್ಯಕ್ತಿಯ ಶೈಕ್ಷಣಿಕವಾಗಿರುವ ಉತ್ತಮ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಸಾರ್ವಜನಿಕ ಸಮಗ್ರತೆ ಮತ್ತು ನೈತಿಕತೆಯ ದೃಷ್ಟಿಕೋನವನ್ನು ಹೊಂದಿದೆ. ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳಿಂದ ತಿಳಿದುಬರುವಂತೆ, ಡಾ. ಎಚ್. ಸಿ. ಸತ್ಯನ್ ವಿರುದ್ಧ ಕರ್ನಾಟಕ ಲೋಕಾಯುಕ್ತ ಮತ್ತು ಇತರ ನ್ಯಾಯಾಂಗ ವೇದಿಕೆಗಳ ಮುಂದಿರುವ ವಿಷಯಗಳು ಸೇರಿದಂತೆ ಕೆಲವು ಕಾನೂನು ಕ್ರಮಗಳು ಬಾಕಿ ಉಳಿದಿವೆ ಎಂದು ವರದಿಯಾಗಿದೆ. ಈ ಬಗ್ಗೆ ಪರಿಶೀಲಿಸಿ ಹೆಜ್ಜೆ ಇಡಬೇಕೆಂದು ಸಮಿತಿಯು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ರಾಜ್ಯಪಾಲರಿಗೂ ಪತ್ರ ಬರೆದು ಪ್ರಶಸ್ತಿಯು ದುರುಪಯೋಗವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
26-03-2008 ರಂದು, ಕರ್ನಾಟಕ ಲೋಕಾಯುಕ್ತ ಪೊಲೀಸರು (ಮೈಸೂರು ವಿಭಾಗ) ಡಾ. ಎಚ್. ಸಿ. ಸತ್ಯನ್ ಅವರನ್ನು ಒಳಗೊಂಡ ಪ್ರಕರಣವನ್ನು ದಾಖಲಿಸಿದ್ದಾರೆ. CNR ಸಂಖ್ಯೆ: KAMSO I -00 457 8-20 12′ ವಿಶೇಷ ಪ್ರಕರಣ ಸಂಖ್ಯೆ 74/2012 ಎಂದು ಉಲ್ಲೇಖಿಸಲಾದ ಈ ವಿಷಯವು ಮೈಸೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ವರದಿಯಾಗಿದೆ. ಈ ಬಗ್ಗೆ ಎಲ್ಲವೂ ಸಂಪೂರ್ಣವಾಗಿ ಪರಿಶೀಲನೆ ಯಾಗಬೇಕೆಂದು ಸಮಿತಿಯು ಸರಣಿ ಪತ್ರಗಳ ಮೂಲಕ ಆಗ್ರಹಿಸಿದೆ.



