ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ರಮೇಶ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಸುವ ಮತಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್ ಧಾರವಾಡ ಪೀಠ ಮುಂದೂಡಿದೆ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ(ಡಿಸಿಸಿ) ಬ್ಯಾಂಕ್ 7 ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಮತದಾನ ನಿಗದಿಯಾಗಿತ್ತು. ಆದರೆ, ಡೆಲಿಗೇಷನ್ ಸಮಸ್ಯೆ ಮುಂದಿಟ್ಟುಕೊಂಡು ಹುಕ್ಕೇರಿ ತಾಲೂಕಿನ ಮದಿಹಳ್ಳಿ ಪಿಕೆಪಿಎಸ್ ನಿರ್ದೇಶಕರೊಬ್ಬರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಹುಕ್ಕೇರಿ ಕ್ಷೇತ್ರಕ್ಕೆ ನಡೆಯಬೇಕಿದ್ದ ಮತದಾನವನ್ನು ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೋರಂ ಇಲ್ಲದೆಯೇ ಮದಿಹಳ್ಳಿ ಪಿಕೆಪಿಎಸ್‌ನಲ್ಲಿ ಡೆಲಿಗೇಷನ್ ಠರಾವು ಪಾಸ್ ಮಾಡಲಾಗಿದೆ ಎಂದು ನಿರ್ದೇಶಕ ಭೀಮಸೇನ ಬಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಮುಂದಿನ ಆದೇಶದವರೆಗೆ ಚುನಾವಣೆ ಮುಂದೂಡಿ ಆದೇಶ ಹೊರಡಿಸಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ರಮೇಶ ಚಿಗರಿ ಮಾಹಿತಿ ನೀಡಿದ್ದಾರೆ.
ಇದೇ ಮದಿಹಳ್ಳಿ ಪಿಕೆಪಿಎಸ್‌ನಲ್ಲಿ ಡೆಲಿಗೇಷನ್ ಠರಾವು ಪಾಸ್ ಮಾಡುವ ಸಂಬಂಧ ನಡೆದ ತಂಟೆಯಲ್ಲಿ, ಸಚಿವ ಸತೀಶ ಜಾರಕಿಹೊಳಿ ಮುಂದೆಯೇ ಮಹಿಳೆಯೊಬ್ಬರು ತಮ್ಮ ಪತಿ, ನಿರ್ದೇಶಕರ ಕಪಾಳಕ್ಕೆ ಹೊಡೆದಿದ್ದು ದೊಡ್ಡ ಸುದ್ದಿ ಆಗಿತ್ತು.
![]()
ಬಿಡಿಸಿಸಿ ಬ್ಯಾಂಕ್ ಚುನಾವಣಾ ಕಾವು: ಬೆಳಗಾವಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆಯನ್ನು ಪ್ರಭಾವಿ ಜನಪ್ರತಿನಿಧಿಗಳು ಪ್ರತಿಷ್ಠೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಸಹಕಾರಿ ಬ್ಯಾಂಕ್ ಚುನಾವಣೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಡಿಸಿಸಿ ಬ್ಯಾಂಕಿನ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 7 ಸ್ಥಾನಗಳಿಗೆ ಅ.19ರಂದು ಭಾನುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಕೂಡ ಅದೇ ದಿನ ಪ್ರಕಟವಾಗಲಿದೆ.
ಅಥಣಿ ತಾಲೂಕಿನಿಂದ 125 ಅರ್ಹ ಮತದಾರರಿದ್ದು, ಬೈಲಹೊಂಗಲ 73, ಹುಕ್ಕೇರಿ 90, ಕಿತ್ತೂರು 29, ನಿಪ್ಪಾಣಿ 119, ರಾಯಬಾಗ 205 ಹಾಗೂ ರಾಮದುರ್ಗ 105 ಮತದಾರರು ಸೇರಿ ಒಟ್ಟು 676 ಮತದಾರರು ಮತದಾನ ಮಾಡಲಿದ್ದಾರೆ.

ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮತದಾನಕ್ಕಾಗಿ ಏಳು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಮತದಾನದ ಕೇಂದ್ರದ ಹೊರಗೆ ಹಾಗೂ ಒಳಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಭೊರಸೆ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಮಾಹಿತಿ ನೀಡಿದರು.



