ರಾಮದುರ್ಗ: ಅಕ್ಟೋಬರ-2 ರಂದು ನಡೆಯಲಿರುವ ಗಾಂಧಿ ಜಯಂತಿ ಅಂಗವಾಗಿ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಾಂಧಿ ಚಿಂತನೆಗಳ ಪ್ರಸ್ತುತತೆ ವಿಷಯ ಕುರಿತು ತಾಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಉಪನ್ಯಾಸಕರಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಶಾಖಾ ವ್ಯವಸ್ಥಾಪಕ ಹನಮಂತ್ರಾಯ ಬಿರಾದಾರ ಹೇಳಿದರು.ಪಟ್ಟಣದ ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಬಂಧ ಸ್ಪರ್ಧೆಯನ್ನು ಬ್ಯಾಂಕ್ ಆಪ್ ಬರೋಡಾ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಂಯುಕ್ತ ಆಶ್ರಯದಲ್ಲಿ ಆಯೋಜನೆ ಮಾಡಲಾಗಿದೆ. ಸ್ಪಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ. ಬಿರಾದಾರ ಅವರು ವಿವಿಧ ಪುಸ್ತಕಗಳನ್ನು ಕೊಡಮಾಡಲಿದ್ದಾರೆ ಎಂದು ಹೇಳಿದರು.
ಗಾಂಧಿಜೀಯವರ ಚಿಂತನೆಗಳನ್ನು ಶಿಕ್ಷಕರು ಮೆಲುಕು ಹಾಕಿ ಅವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಉದ್ದೇಶದಿಂದ ಶಿಕ್ಷಕ, ಉಪನ್ಯಾಸಕರಿಗೆ
ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ತಾಲೂಕಿನ ಸಮಸ್ತ ಸರಕಾರಿ, ಖಾಸಗಿ, ಅನುದಾನಿತ ಶಾಲಾ ಶಿಕ್ಷಕ, ಉಪನ್ಯಾಸಕ ಬಳಗ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದ ಅವರು, ಪ್ರಬಂಧವನ್ನು ತಾವೆ ಕೈ ಬರಹದ ಮುಖಾಂತರ ಬರೆದುಕೊಂಡು, ಸೆ. 29 ರೊಳಗಾಗಿ ಪಟ್ಟಣದ ಪಿಎಂಶ್ರೀ ಶಾಲೆ ನಂ.4ರ ಶಿಕ್ಷಕ ಎನ್ .ಎ. ಶೇಖ ಅವರ ಹತ್ತಿರ ತಲುಪಿಸಬೇಕು. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ.12 ಸಾವಿರ, ದ್ವೀತಿಯ.9 ಸಾವಿರ, ತೃತೀಯ 6 ಸಾವಿರ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9449210795 ಸಂಖ್ಯೆಗೆ ಸಂಪರ್ಕಿಸಬೇಕು.ವಿಜೇತರಿಗೆ ಅಕ್ಟೋಬರ-2 ರಂದು ಪಟ್ಟಣದ ಗುರು ಭವನದಲ್ಲಿ ಸಂಜೆ 4 ಘಂಟೆಗೆ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಲವು ಮುತ್ಸದ್ದಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹನಮಂತ್ರಾಯ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಬಸವರಾಜ ಐನಾಪೂರ, ಬ್ಯಾಂಕ್ ಆಫ್ ಬರೋಡಾ ಸಹಾಯಕ ವ್ಯವಸ್ಥಾಪಕ ವುಡಮುಡಿ ಶಿವಕುಮಾರ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಐ. ಪಾಟೀಲ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಏಣಿ, ಶಿಕ್ಷಕ ಎನ್.ಎ, ಶೇಖ ಸೇರಿದಂತೆ ಇತರರಿದ್ದರು