ಮಾನವರ ಅಳಿವು – ಉಳಿವು ಅರಣ್ಯದ ಉಳಿವಿನ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ.ಹಸಿರಿನ ಹೊದಿಕೆ ಹೆಚ್ಚಾದರೆ ಅರಣ್ಯವೂ ಹೆಚ್ಚುತ್ತದೆ. ಅರಣ್ಯ ಸಂಪತ್ತೂ ಹೆಚ್ಚುತ್ತದೆ. ಕಾಡು ಪ್ರಾಣಿ ಸಂಪತ್ತಿನಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕಾಡು ಪ್ರಾಣಿಗಳಿಗೆ ಅಗತ್ಯವಾದ ಆಹಾರ, ನೀರು ಕಾಡಿನಲ್ಲೇ ಸಾಕಷ್ಟು ಸಿಗುವಂತೆ ಮಾಡಿದರೆ ವನ್ಯಜೀವಿ – ಮಾನವ ಸಂಘರ್ಷವನ್ನು ತಡೆಗಟ್ಟಬಹುದು.
ಕಾಡು ಪ್ರಾಣಿಗಳ ಮತ್ತು ಮಾನವರ ಸಂಘರ್ಷ ತಪ್ಪಿಸಲು ರೈಲ್ವೇ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ಮತ್ತು ಇವುಗಳ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲು ನಾವು ಸ್ಪಷ್ಟ ಸೂಚನೆ ನೀಡಿದ್ದೇವೆ. ಅರಣ್ಯ ಇಲಾಖೆ ಬಳಿಯೂ ಸಾಕಷ್ಟು ಹಣ ಇದೆ. ಅಗತ್ಯಬಿದ್ದರೆ ಸರ್ಕಾರ ಕೂಡ ಹಣ ಕೊಡಲು ಸಿದ್ಧವಿದೆ. ಆದ್ದರಿಂದ ಸಮರ್ಪಕವಾಗಿ ಬ್ಯಾರಿಕೇಡ್ ನಿರ್ಮಿಸಿ ಆನೆ-ಮಾನವ ಸಂಘರ್ಷ ತಪ್ಪಿಸಬೇಕು.ಹಿರಿಯ ಅಧಿಕಾರಿಗಳು ಆಗಿಂದ್ದಾಗೆ ಕಾಡಿಗೆ ಭೇಟಿ ನೀಡಿ, ಹೆಚ್ಚೆಚ್ಚು ಕಾಡಿನಲ್ಲೇ ಉಳಿಯಬೇಕು. ಆಗ ಮಾತ್ರ ಕೆಳ ಹಂತದ ಸಿಬ್ಬಂದಿ ಕೂಡ ಕಾಡೊಳಗೆ ಇದ್ದು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಆಯೋಜಿಸಿದ್ದ “ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2025″ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಕರ್ತವ್ಯದ ವೇಳೆ ಹುತಾತ್ಮರಾದ ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿದರು.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.