ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಒಪ್ಪಿತ ದರ ನಿಗದಿ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವರು ಇನ್ನಿಲ್ಲದ ತಾಲೀಮು ಮಾಡಿದ್ದು, ದರ ನಿಗದಿ ವಿಷಯ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇಂದು ಮಧ್ಯಾಹ್ನದ ಹೊತ್ತಿಗೆ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಗಳು ನಿಚ್ಚಳವಾಗಿವೆ.
ಕಳೆದ ಎರಡು ವರ್ಷಗಳಿಂದ ಯುಕೆಪಿ ಹಂತ-3 ಪೂರ್ಣಗೊಳಿಸಲು ಸರ್ಕಾರ ಸಾಕಷ್ಟು ಸರ್ಕಸ್ ಮಾಡುತ್ತಿದೆ. ಯೋಜನಾನುಷ್ಠಾನಕ್ಕಾಗಿ ಮುಳುಗಡೆ ಆಗುವ ಜಮೀನಿಗೆ ಎಷ್ಟು ಪರಿಹಾರ ಕೊಡಬೇಕು ಎನ್ನುವುದು ಸರ್ಕಾರಕ್ಕೆ ಬಹುದೊಡ್ಡ ಸವಾಲು. ಆ ಸವಾಲು ಎದುರಿಸಲು ಸರ್ಕಾರ ರೈತರು, ಸಚಿವರು, ಶಾಸಕರ ನಡುವೆ ನಿರಂತರ ಸಭೆಗಳನ್ನು ನಡೆಸುತ್ತ ಬಂದಿರುವ ಸರ್ಕಾರ ಅಂತಿಮ ನಿರ್ಧಾರ ಘೋಷಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಯುಕೆಪಿ ಯೋಜನಾ ವ್ಯಾಪ್ತಿಯ ರೈತರು ಕೂಡಾ ಈ ಬಾರಿ ಭೂಸ್ವಾಧೀನಕ್ಕೆ ಸೂಕ್ತ ಪರಿಹಾರ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಾರ ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲು ಬಂದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ಸೆಂಟ್ ( ಒಪ್ಪಿತ ದರ) ಅವಾರ್ಡ ಘೋಷಣೆ ಮಾಡಬಹುದು ಎನ್ನುವ ಆಶಯದಲ್ಲಿ ರೈತರು ಇದ್ದರು.
ಕೃಷ್ಣೆಗೆ ಬಾಗಿನ ಸಲ್ಲಿಸಿದ ಬಳಿಕ ಮಾತನಾಡಿದ್ದ ಸಿದ್ದರಾಮಯ್ಯ ಅವರು ವಾರದಲ್ಲಿ ಪರಿಹಾರ ಘೋಷಣೆ ಭರವಸೆ ನೀಡಿದ್ದರು. ಬುಧವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಕನ್ಸೆಂಟ್ ಅವಾರ್ಡ ಘೋಷಣೆಗೆ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೂ ಮುನ್ನ ನಡೆದ ಸಭೆಗಳಲ್ಲಿ ಪ್ರತಿಪಕ್ಷದ ಮುಖಂಡರ ಅಭಿಪ್ರಾಯ ಪಡೆದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸರ್ಕಾರ ಘೋಷಿಸುವ ಪರಿಹಾರಕ್ಕೆ ಸಮ್ಮತಿ ನೀಡಬೇಕು ಎಂದು ಮನವಿಮಾಡಿದ್ದರೆ, ಮುಖ್ಯಮಂತ್ರಿಗಳು ಒಪ್ಪಿತ ದರ ಘೋಷಣೆ ಬಳಿಕ ಯಾರೂ ನ್ಯಾಯಾಲಯಕ್ಕೆ ಹೋಗಬೇಡಿ. ಇದರಿಂದ ಯೋಜನೆ ವಿಳಂಬವಾಗಲಿದೆ ಎಂದು ಹೇಳಿದ್ದಾರೆ.
ರೈತರು ನ್ಯಾಯಾಲಯಕ್ಕೆ ಹೋಗದ ಹಾಗೆ ಸರ್ಕಾರ ಕನ್ಸೆಂಟ್ ಅವಾರ್ಡ ಘೋಷಣೆ ಮಾಡಬೇಕಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರು ಸೇರಿದಂತೆ ರೈತರು, ಈಗಾಗಲೇ ಪ್ರತಿ ಎಕರೆ ನೀರಾವರಿ ಭೂಮಿಗೆ 50 ಲಕ್ಷ ರೂ., ಒಣ ಬೇಸಾಯಕ್ಕೆ 40 ಲಕ್ಷ ರೂ. ನೀಡುವಂತೆ ಕೋರಿದ್ದಾರೆ. ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬುಧವಾರ ನಡೆದ ಸಚಿವರು, ಶಾಸಕರ ಸಭೆ ಪರಿಹಾರ ನೀಡಿಕೆ ವಿಷಯದಲ್ಲಿ ಒಂದು ಅಂತಿಮ ನಿರ್ಧಾರಕ್ಕೆ ಬಂದಂತಿದೆ. ಗುರುವಾರ ಮಧ್ಯಾಹ್ನ ನಡೆಯಲಿರುವ ಸಂಪುಟ ಸಭೆಯಲ್ಲಿ ಕನ್ಸೆಂಟ್ ಅವಾರ್ಡ ವಿಷಯ ಪ್ರಸ್ತಾಪಗೊಂಡು, ಅನುಮೋದನೆ ಪಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ.ಹಾಗಾಗಿ ಯುಕೆಪಿ ಹಂತ-3 ರಲ್ಲಿ ಸ್ವಾಧೀನಕ್ಕೊಳಪಡುವ ಜಮೀನುಗಳ ರೈತರು ಸಂಪುಟ ಸಭೆಯಿಂದ ಬರುವ ನಿರ್ಧಾರ ಏನಾಗಿರಲಿದೆ ಎನ್ನುವ ಕಾತರದಲ್ಲಿದ್ದಾರೆ. ಪ್ರತಿಪಕ್ಷಗಳು ಕೂಡ ಸರ್ಕಾರದ ನಿರ್ಧಾರ ಕಾಯ್ದು ನೋಡುತ್ತಿವೆ. ಗುರುವಾರದ ಸಂಪುಟದ ಸಭೆಯಿಂದ ಕನ್ಸೆಂಟ್ ಅವಾರ್ಡ ಕುರಿತಂತೆ ಉತ್ತಮ ನಿರ್ಧಾರ ಹೊರ ಬರಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.
Trending Now
