ಬೆಳಗಾವಿ: ಕಾಗವಾಡ ಕ್ಷೇತ್ರದ ಜನರ ಕುರಿತು ಕಾಳಜಿ ವಹಿಸುತ್ತಿರುವ ರಾಜು ಕಾಗೆಯವರು ಜನಮೆಚ್ಚಿದ ಶಾಸಕರಾಗಿದ್ದಾರೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಶ್ಲಾಘಿಸಿದರು.
ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿಂದು 4,367 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪೌರಾಡಳಿತ ಇಲಾಖೆಯ ವತಿಯಿಂದ ಅಮೃತ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಶಾಸಕ ರಾಜು ಕಾಗೆ ಜೊತೆಯಾಗಿ ಚಾಲನೆ ನೀಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಗವಾಡ ಕ್ಷೇತ್ರದಲ್ಲಿ ರಾಜು ಕಾಗೆ ಅವರು ಜನಪರ ನಿಲುವಿನೊಂದಿಗೆ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅವರ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಅಲ್ಲದೆ ಶೇಡಬಾಳದಲ್ಲಿ ಶಾಲೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಸಂಸದರ ನಿಧಿಯಿಂದ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಗಮನ ಹರಿಸಿ ಅನುದಾನ ನೀಡುತ್ತೇನೆ. 4 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಅನುದಾನದಲ್ಲಿ ಲೋಕಸಭಾ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ. ಇಡೀ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಅಧಿಕ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಕ್ಷೇತ್ರದ ಜನರು ಪ್ರೀತಿಯಿಂದ ನನ್ನ ಮೇಲೆ ನಂಬಿಕೆ ಇಟ್ಟು ಆಶೀರ್ವಾದ ಮಾಡಿದ್ದಾರೆ. ಅವರ ಮನವಿ ಪರಿಗಣಿಸಿ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮುಂಬರುವ ದಿನಗಳಲ್ಲಿ ಕಾಗವಾಡ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ಮಂಜೂರು ಮಾಡುವ ಮೂಲಕ ಶಾಸಕರ ಜೊತೆಯಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಪ್ರಿಯಾಂಕಾ ಜಾರಕಿಹೊಳಿ ಅಭಯ ನೀಡಿದರು.
ಬಳಿಕ ಸಂಸದರಿಗೆ ಶೇಡಬಾಳ, ಉಗಾರ ಸೇರಿದಂತೆ ವಿವಿಧ ಗ್ರಾಮಸ್ಥರು ಹಾಗೂ ಮಹಿಳೆಯರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶೇಡಬಾಳ ಪಟ್ಟಣ ಪಂಚಾಯತ ಅಧ್ಯಕ್ಷ ಉತ್ಕರ್ಷ ಪಾಟೀಲ, ಕಾಗವಾಡ ಪಿ.ಎಸ್.ಐ ರಾಘವೇಂದ್ರ ಖೋತ, ಕುಡಿಯುವ ನೀರು ಪೂರೈಕೆ, ಒಳ ಚರಂಡಿ ಮಂಡಳಿಯ ಆರ್.ಕೆ.ಉಮೇಶ, ಸಹ್ಯಾದ್ರಿ ಕನ್ಸಟ್ರಕ್ಷನ್ಸ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸತ್ಯಜಿತ ನಲವಡೆ, ಕಾಂಗ್ರೆಸ್ ಮುಖಂಡರಾದ ಅಣ್ಣಾ ಸಾಹೇಬ್ ಅರವಾಡೆ, ವಿನೋದ ಬರಗಾಲೆ, ಚಿದಾನಂದ ಸಾಂಗ್ಲೆ, ಜಗದೀಶ್ ಮರಾಠೆ, ರಮೇಶ ಸಿಂದಗಿ, ಮಹಾದೇವಿ ಮಾಕಣ್ಣವರ ಸೇರಿದಂತೆ ಶೇಡಬಾಳ ಗ್ರಾಮಸ್ಥರು ಉಪಸ್ಥಿತರಿದ್ದರು.