ಬೆಂಗಳೂರು: ಯುವಕರೇ ತುಂಬಿರುವಂತಹ ಭಾರತೀಯ ಸಮಾಜದಲ್ಲಿ ಆರೋಗ್ಯವಂತರ ಗುಂಪು ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸಲು ಸಾಧ್ಯವಾಗುತ್ತದೆ. ಈ ಮಹತ್ವಾಕಾಂಕ್ಷೆಯಿಂದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶ್ರೀ ಅಷ್ಠವಿನಾಯಕ ಗಣೇಶ್ ಉತ್ಸವ ಮಂಡಳ ಕುಂಬಾರ ಗಲ್ಲಿಯಲ್ಲಿ ಶ್ರೀ ಸಾಯಿ ಲ್ಯಾಬೊರೇಟರೀಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 30ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ.
ದಾನಗಳಲ್ಲಿ ರಕ್ತದಾನ ಮಹಾದಾನ. ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವುದರ ಮೂಲಕ ಎಲ್ಲರೂ ಜನರ ಅಮೂಲ್ಯವಾದ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಮಂಡಳದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಮಾನವನಿಗೆ ಆಕಸ್ಮಿಕ ಸಂದರ್ಭಗಳಲ್ಲಿ ತುರ್ತಾಗಿ ಅಗತ್ಯ ವೇಳೆಯಲ್ಲಿ ಬೇಕಾಗುವ ರಕ್ತವು ಅಮೂಲ್ಯ ಜೀವ ಉಳಿಸುವ ವಸ್ತುವಾಗಿದೆ. ಇದನ್ನರಿತು ಸಮಾಜದ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಮಾದರಿಯಾಗಬೇಕು ಎಂದು ಮಂಡಳದ ಪದಾಧಿಕಾರಿಗಳು ತಿಳಿಸಿದ್ದಾರೆ.
ರಕ್ತದಾನ ಮಾಡಿದರೆ ತಮ್ಮ ದೇಹದ ಕೊಬ್ಬಿನಾಂಶ ಕಡಿಮೆಯಾಗಿ ಹೊಸ ರಕ್ತ ಉತ್ಪತ್ತಿಯಾಗಲಿದೆ. ಅಲ್ಲದೆ ವ್ಯಕ್ತಿಯು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡಲು ಮುಂದಾಗಬೇಕೆಂದು ಸೌರಭ್ ತಳವಾರ, ಉನ್ಮೇಶ್ ಜಾಧವ್, ಓಂಕಾರ್, ಮಹೇಶ್, ಅವಿನಾಶ್, ಅಮಿತ್ ಘೋರ್ಪಡೆ ಹಾಗೂ ಜಗದೀಶ್ ಮರಾಠೆ ಸೇರಿದಂತೆ ಮಂಡಳದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.