HMT ಭೂಮಿ ಅರಣ್ಯವಾಗಿದ್ದು, ಅರಣ್ಯವಾಗೇ ಉಳಿಯುತ್ತದೆ ದಾಖಲೆಗಳೊಂದಿಗೆ HDKಗೆ ಖಂಡ್ರೆ ತಿರುಗೇಟು
ಬೆಂಗಳೂರು : ನಾನು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವವನೂ ಅಲ್ಲ, ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಆದರೆ ಎಚ್.ಎಂ.ಟಿ. ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆದು ಅಲ್ಲಿ ಲಾಲ್ಬಾಗ್, ಕಬ್ಬನ್ ಪಾರ್ಕ್ಗಿಂತ ದೊಡ್ಡ ಉದ್ಯಾನ ನಿರ್ಮಿಸಿ ಉತ್ತರ ಬೆಂಗಳೂರಿನ ಜನರಿಗೆ ಅತ್ಯಗತ್ಯವಾದ ಶ್ವಾಸತಾಣ ಉಳಿಸಲು ನಿರ್ಧರಿಸಿರುವ ಪರಿಸರ ಆಸಕ್ತನಾಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ದಾಖಲೆಗಳು, ಕಾನೂನು ಹಾಗೂ ನ್ಯಾಯಾಲಯದ ತೀರ್ಪುಗಳ ಆಧಾರದ ಮೇಲೆ ಉತ್ತರ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ “ಯಾವ ಖಂಡ್ರೆ, ಎಚ್.ಎಂ.ಟಿ. ಆದಾಗ ನಾನು ಹುಟ್ಟೇ ಇರಲಿಲ್ಲ” ಎಂದು ಹೇಳಿದ್ದಾರೆ. ನಾನೂ ಕೂಡ “ಯಾವ ಸ್ವಾಮಿ… ಕುಮಾರಸ್ವಾಮಿ” ಎನ್ನಬಹುದು. ಅವರೂ ಎಚ್.ಎಂ.ಟಿ. ಹುಟ್ಟಿದಾಗ ಹಸುಗೂಸೇ ಎಂದು ಹೇಳಬಹುದು. ಆದರೆ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಚಾಟಿ ಬೀಸಿದ್ದಾರೆ.
ಕುಮಾರಸ್ವಾಮಿ ಅವರೇ ಎಚ್.ಎಂ.ಟಿ. ಜಮೀನಿನ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ. ಆದರೆ ಅದೇ ವೇಳೆ ಸರ್ಕಾರಕ್ಕೆ ಈ ಭೂಮಿಯ ಮೇಲೆ ಹಕ್ಕಿಲ್ಲ ಎಂದೂ ಘೋಷಿಸಿದ್ದಾರೆ. ಈ ತೀರ್ಪು ನೀಡಬೇಕಾದವರು ನ್ಯಾಯಾಧೀಶರು, ಕುಮಾರಸ್ವಾಮಿ ಅವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಒಮ್ಮೆ ಅರಣ್ಯ ಎಂದು ಘೋಷಿತವಾದ ಭೂಮಿ ಕಾನೂನುಬದ್ಧವಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದಿದ್ದರೆ ಅದು ಅರಣ್ಯವಾಗಿಯೇ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಪರಿಸರದ ಹಕ್ಕುಗಳು ಭೂ ಒಡೆತನದ ಹಕ್ಕಿಗಿಂತ ಮಿಗಿಲು ಎಂಬುದನ್ನೂ ಹೇಳಿದೆ. ಆದ್ದರಿಂದ ಎಚ್.ಎಂ.ಟಿ. ಭೂಮಿ ಅರಣ್ಯವಾಗಿದ್ದು, ಅರಣ್ಯವಾಗಿಯೇ ಉಳಿಯುತ್ತದೆ. ಅದು ರಾಜ್ಯ ಸರ್ಕಾರದ ಆಸ್ತಿಯಾಗಿಯೇ ಇರುತ್ತದೆ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಬೆಂಗಳೂರು ನಗರ ಡಿಸಿಎಫ್ ನೋಟಿಸ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ ಅದು ನೋಟಿಸ್ ಅಲ್ಲ. ಅದು ಕರ್ನಾಟಕ ಅರಣ್ಯ ಕಾಯಿದೆ, 1963ರ ಸೆಕ್ಷನ್ 64(ಎ) ಅಡಿಯಲ್ಲಿ ನೀಡಿರುವ ಅರೆ ನ್ಯಾಯಿಕ ಪ್ರಾಧಿಕಾರದ ಆದೇಶ. ಸಂಬಂಧಪಟ್ಟವರಿಗೆ ದಾಖಲೆ ಸಲ್ಲಿಸಲು ಅವಕಾಶ ನೀಡಿದ ನಂತರ, ಸೂಕ್ತ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶದ ಬಗ್ಗೆ ಅಸಮ್ಮತಿ ಇದ್ದರೆ ಕಾನೂನು ಪ್ರಕಾರ ಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು, ನಂತರ ಹೈಕೋರ್ಟ್ಗೂ ಹೋಗಬಹುದು. ಆದರೆ ಕಾನೂನು ಪ್ರಕ್ರಿಯೆಯನ್ನು ಬಿಟ್ಟು ಜನರ ಮುಂದೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಕುಟುಕಿದ್ದಾರೆ.
1901ರಿಂದ 1969ರವರೆಗೆ ಯಾವುದೇ ಮೀಸಲು ಅರಣ್ಯವನ್ನು ಡಿ-ಫಾರೆಸ್ಟ್ ಮಾಡಲು ಅಧಿಸೂಚನೆ ಕಡ್ಡಾಯವಾಗಿತ್ತು. ಅಂತಹ ಅಧಿಸೂಚನೆ ಇದ್ದರೆ ದಾಖಲೆ ತೋರಿಸಲಿ. ದಾಖಲೆ ಇಲ್ಲದೆ ಆರೋಪ ಮಾಡುವುದರಿಂದ ಸತ್ಯ ಬದಲಾಗುವುದಿಲ್ಲ ಎಂದು ತಿವಿದಿದ್ದಾರೆ.
ಎಚ್.ಎಂ.ಟಿ.ಗೆ ಜಮೀನು ನೀಡಿದ ಸಂದರ್ಭದಲ್ಲೇ ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಅರಣ್ಯ ಭೂಮಿ ನೀಡಲಾಗಿತ್ತು. 1969ರ ಫೆಬ್ರವರಿ 24ರಂದು ಅದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂಬ ದಾಖಲೆಗಳನ್ನು ಇಂದು ಸಚಿವ ಈಶ್ವರ್ ಖಂಡ್ರೆ ದಾಖಲೆಗಳನ್ನು ಪ್ರದರ್ಶನ ಮಾಡಿದ್ದಾರೆ



