ರಾಮದುರ್ಗದಲ್ಲಿ ಪತ್ರಿಕಾ ದಿನಾಚರಣೆ: ಸಮಾಜದ ಕನ್ನಡಿಯೇ ಪತ್ರಿಕಾ ಮಾಧ್ಯಮ – ಗಣ್ಯರ ಅಭಿಮತ
ರಾಮದುರ್ಗ:
ಪ್ರೆಸ್ ಕ್ಲಬ್ ರಾಮದುರ್ಗ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ನಗರದ ಸಿ.ಎಸ್. ಬೆಂಬಳಗಿ ಮಹಾವಿದ್ಯಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಗೌಡಪ್ಪ ಗೌಡ ಪಾಟೀಲ ಅವರು ನಿರೂಪಿಸಿದರು. ಈರಣ್ಣ ಬುಡ್ಡಗೋಳ ಅವರು ಸ್ವಾಗತಿಸಿದರು. ಮಲ್ಲಿಕಾರ್ಜುನ ರೆಡ್ಡಿ ಗೊಂದಿ ಅವರು ಪ್ರಾಸ್ತಾವಿಕ ನುಡಿಗಳ ಮೂಲಕ ಪತ್ರಿಕಾ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮದುರ್ಗ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ ಪ್ರಕಾಶ ಗಾಯಕ್ವಾಡ ಅವರು ಮಾತನಾಡಿ, “ಪತ್ರಿಕಾ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮಾಜಕ್ಕೆ ದಿಕ್ಕು ತೋರಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ” ಎಂದು ಹೇಳಿದರು.
ಕನ್ನಡಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದನ್ನವರ ಅವರು ಅತಿಥಿ ಉಪನ್ಯಾಸಕರಾಗಿ ಮಾತನಾಡಿ, “ಪತ್ರಿಕಾ ಮಾಧ್ಯಮವು ಸಮಾಜದ ಕನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಧಾರವಾಡ ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಬಸು ಬೇವಿನಗಿಡದ ಅವರು ಮಾತನಾಡಿ, “ಪಾಲಕರು ಮೊದಲು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡು, ನಂತರ ಮಕ್ಕಳಿಗೂ ಓದಿನ ಸಂಸ್ಕಾರವನ್ನು ಬೆಳೆಸಬೇಕು” ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಮದುರ್ಗ ಉಪವಿಭಾಗದ ಡಿವೈಎಸ್ಪಿ ಚಿದಂಬರ ಮಡಿವಾಳರ ಅವರು, “ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಜವಾಬ್ದಾರಿಯುತವಾಗಿ ತಿದ್ದಿ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಪತ್ರಿಕಾ ಮಾಧ್ಯಮದ ಮೇಲಿದೆ” ಎಂದು ಹೇಳಿದರು.
ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಎಸ್.ಎಸ್. ಸುಲ್ತಾನಪುರ ಅವರು ಮಾತನಾಡಿ, “ಸಂವಿಧಾನದ ನಾಲ್ಕೂ ಅಂಗಗಳಿಗೆ ಬುನಾದಿ ಹಾಕಿ ಕೊಡುವುದು ಶಿಕ್ಷಣ ಸಂಸ್ಥೆಗಳ ಕಾರ್ಯವಾಗಿದೆ” ಎಂದು ತಿಳಿಸಿದರು.
ಕೊನೆಯಲ್ಲಿ ಉದಯವಾಣಿ ಪತ್ರಿಕೆಯ ವರದಿಗಾರರಾದ
ಐ ಆರ್ ಪಾಟೀಲ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರು, ಗಣ್ಯರು, ಉಪನ್ಯಾಸಕರು ಪ್ರಶಿಕ್ಷಣಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



