ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಜಾಗೃತಿ ಜಾಥಾ
ಅರ್ಹ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ
ಧಾರವಾಡ ಜೂ.29: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿ ಆವರಣದಲ್ಲಿ ಇಂದು (ಜೂ.29) ಬೆಳಿಗ್ಗೆ ಭಾರತ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಮತದಾರರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸದುದ್ದೇಶದಿಂದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)-2026 ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸ್ನೇಹಲ್ ಆರ್. ಮತ್ತು ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ ಪಾಟೀಲ ಅವರು ಆಕಾಶಕ್ಕೆ ಬಲೂನ್‍ಗಳನ್ನು ಹಾರಿಸುವ ಮುಖಾಂತರ ಬೃಹತ್ ಜಾಗೃತಿ ಮೆರವಣಿಗೆಗೆ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸ್ನೇಹಲ್ ಆರ್. ಮತ್ತು ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ್ವರ ಪಾಟೀಲ ಅವರು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸ್ನೇಹಲ್ ಆರ್. ಅವರು ಮಾತನಾಡಿ, ದೋಷರಹಿತ ಹಾಗೂ ನಿಖರವಾದ ಮತದಾರರ ಪಟ್ಟಿಯ ಅವಶ್ಯಕತೆಯನ್ನು ವಿವರಿಸಿದರು. ಪ್ರತಿಯೊಬ್ಬ ಅರ್ಹ ನಾಗರಿಕನೂ ಎನ್ಯುಮರೇಷನ್ ಫಾರ್ಮ್ ಅನ್ನು ತಪ್ಪದೇ ಭರ್ತಿ ಮಾಡಿ ಸಲ್ಲಿಸುವಂತೆ ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಭುವನೇಶ್ವರ ಪಾಟೀಲ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯ ಪಾತ್ರ ಹಿರಿದಾಗಿದ್ದು, ರಾಜಕೀಯ ಪಕ್ಷಗಳು, ಯುವ ಮತದಾರರು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಏಜೆಂಟರು ಸೇರಿದಂತೆ ಸಾರ್ವಜನಿಕರೆಲ್ಲರೂ ಇದರಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ವಿನಂತಿಸಿದರು.
ಜಾಥಾವು ಪಾಲಿಕೆ ಆವರಣದಿಂದ ಹೊರಟು ಮಹಾರಾಣಾ ಪ್ರತಾಪ ವೃತ್ತ ಹಾಗೂ ಸ್ವಾಮಿ ವಿವೇಕಾನಂದ ವೃತ್ತದ ಮುಖಾಂತರ ಸಾಗಿ, ಕೆಸಿಸಿ ಬ್ಯಾಂಕ್ ಮಾರ್ಗವಾಗಿ ಕಲಾಭವನದ ಆವರಣವನ್ನು ತಲುಪಿ ಸಂಪನ್ನಗೊಂಡಿತು.
ಈ ಬೃಹತ್ ಜಾಗೃತಿ ಅಭಿಯಾನದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮತದಾರರ ನೋಂದಣಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸಹಾಯಕ ಅಧಿಕಾರಿ ಉಮೇಶ ಸವಣೂರ, ಪಾಲಿಕೆಯ ವಲಯ ಕಚೇರಿ ಆಯುಕ್ತರಾದ ಅರವಿಂದ ಜಮಖಂಡಿ, ಶಂಕರ ಪಾಟೀಲ ಮತ್ತು ರಮೇಶ್ ನ್ಯೂಲ್ವಿ ಹಾಜರಿದ್ದರು. ಜಾಥಾದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ಸಿಬ್ಬಂದಿ, ಚುನಾವಣಾ ಕಾರ್ಯಕರ್ತರು, ಯುವ ಮತದಾರರು ಹಾಗೂ ಸಾರ್ವಜನಿಕರು ‘ದೋಷಮುಕ್ತ ಮತದಾರರ ಪಟ್ಟಿ-ಬಲಿಷ್ಠ ಪ್ರಜಾಪ್ರಭುತ್ವ’ ಎಂಬ ಮೂಲ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.



