ಕಿಂಗ್ ಕೊಹ್ಲಿ ಹೊಸ ವಿಶ್ವದಾಖಲೆ: ಸಚಿನ್ ಹಿಂದಿಕ್ಕಿ ‘ವೇಗದ 28 ಸಾವಿರ’ ರನ್ ಸರದಾರ!
ವಡೋದರಾ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್‌ಗಳನ್ನು ಪೂರೈಸುವ ಮೂಲಕ ಇತಿಹಾಸ ಬರೆದಿದ್ದಾರೆ. ವಿಶೇಷವೆಂದರೆ, ಈ ಮೈಲಿಗಲ್ಲನ್ನು ಅತ್ಯಂತ ವೇಗವಾಗಿ ತಲುಪಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ವೇಗದ ದಾಖಲೆಯ ತುಲನೆ:
ವಿರಾಟ್ ಕೊಹ್ಲಿ ಕೇವಲ 624 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ಹೆಸರಲ್ಲಿತ್ತು.
ವಿರಾಟ್ ಕೊಹ್ಲಿ: 624 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್: 644 ಇನ್ನಿಂಗ್ಸ್
ಕುಮಾರ್ ಸಂಗಕ್ಕಾರ: 666 ಇನ್ನಿಂಗ್ಸ್
ಸಂಗಕ್ಕಾರ ದಾಖಲೆ ಪತನ:
ಇದೇ ಪಂದ್ಯದಲ್ಲಿ ಕೊಹ್ಲಿ ಲಂಕಾ ದಿಗ್ಗಜ ಕುಮಾರ್ ಸಂಗಕ್ಕಾರ (28,016 ರನ್) ಅವರ ಒಟ್ಟು ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 2ನೇ ಬ್ಯಾಟರ್ ಆಗಿ ವಿರಾಟ್ ಹೊರಹೊಮ್ಮಿದ್ದಾರೆ. ಈಗ ಅವರ ಮುಂದೆ ಇರುವುದು ಕೇವಲ ಸಚಿನ್ ತೆಂಡೂಲ್ಕರ್ (34,357 ರನ್) ಮಾತ್ರ.
ಮಗಳ ಜನ್ಮದಿನದಂದೇ ವಿಶೇಷ ಸಂಭ್ರಮ:
ಇಂದು ವಿರಾಟ್ ಮಗಳು ವಾಮಿಕಾ ಅವರ ಜನ್ಮದಿನ. ಈ ವಿಶೇಷ ದಿನದಂದೇ ವಿರಾಟ್ ಈ ವಿಶ್ವದಾಖಲೆ ನಿರ್ಮಿಸಿರುವುದು ಅಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ. ಸದ್ಯ ಕಿವೀಸ್ ವಿರುದ್ಧದ ಪಂದ್ಯದಲ್ಲಿ 50 ರನ್ ದಾಟಿ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ, ತಮ್ಮ 54ನೇ ಏಕದಿನ ಶತಕದತ್ತ ಮುನ್ನುಗ್ಗುತ್ತಿದ್ದಾರೆ.
ದಾಖಲೆಗಳ ಸರದಾರ: ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ 53 ಶತಕ ಬಾರಿಸಿರುವ ಕೊಹ್ಲಿ, ಈ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ



